ಅಫ್ಘಾನಿಸ್ತಾನದಲ್ಲಿ ಸರಣಿ ಬಾಂಬ್ ಸ್ಫೋಟ: ಕನಿಷ್ಟ 16 ಮಂದಿ ಮೃತ್ಯು; ಹಲವರಿಗೆ ಗಾಯ
ಕಾಬೂಲ್, ಮೇ 26: ಅಫ್ಘಾನಿಸ್ತಾನದಲ್ಲಿ ಬುಧವಾರ 4 ಬಾಂಬ್ ಸ್ಫೋಟ ಸಂಭವಿಸಿದ್ದು ಕನಿಷ್ಟ 16 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಾಜಧಾನಿ ಕಾಬೂಲ್‌ನ ಮಸೀದಿಯಲ್ಲಿ ಬುಧವಾರ ಸಂಜೆ ಶಕ್ತಿಶಾಲಿ ಬಾಂಬ್ ಸ್ಫೋಟಿಸಿದ್ದು ಕನಿಷ್ಟ 5 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತದ ಮೂಲಗಳು ಹೇಳಿವೆ. ಸ್ಫೋಟದಿಂದ ಮೃತಪಟ್ಟ 5 ಮಂದಿಯ ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ ಹಾಗೂ 15ಕ್ಕೂ ಅಧಿಕ ಗಾಯಾಳುಗಳು ಚಿಕಿತ್ಸೆಗೆ ದಾಖಲಾಗಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ ಬಾಲ್ಕ್ ಪ್ರಾಂತದ ಮಝರ್ ಎ ಶರೀಫ್ ನಗರದಲ್ಲಿ 3 ಪ್ರತ್ಯೇಕ ಬಾಂಬ್ ಸ್ಫೋಟ ಸಂಭವಿಸಿದೆ.
ಮೂರು ಮಿನಿಬಸ್‌ಗಳಲ್ಲಿ ಬಾಂಬ್ ಸ್ಫೋಟವಾಗಿದ್ದು ಕನಿಷ್ಟ 10 ಮಂದಿ ಗಾಯಗೊಂಡಿದ್ದು 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಶಿಯಾ ಸಮುದಾಯದವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಬಾಲ್ಕ್ ಪ್ರಾಂತದ ಕಮಾಂಡರ್ ಅವರ ವಕ್ತಾರ ಮುಹಮ್ಮದ್ ಆಸಿಫ್ ವಝೇರಿ ಹೇಳಿದ್ದಾರೆ. ಯಾವುದೇ ಸಂಘಟನೆ ಬಾಂಬ್ ಸ್ಫೋಟದ ಹೊಣೆ ಹೊತ್ತಿಲ್ಲ ಎಂದು ಮೂಲಗಳು ಹೇಳಿವೆ.