ಉಕ್ರೇನ್ ಬಂದರಿನಿಂದ ಹಡಗು ಹೊರಡಲು ಅವಕಾಶವಿದೆ ಆದರೆ ಷರತ್ತು ಅನ್ವಯಿಸಲಿದೆ: ರಶ್ಯ
ಮಾಸ್ಕೊ, ಮೇ 26: ಜಾಗತಿಕ ಆಹಾರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನಿಸಿ, ಉಕ್ರೇನ್‌ನ ಬಂದರುಗಳಲ್ಲಿ ತಡೆಹಿಡಿಯಲಾಗಿರುವ ಆಹಾರವಸ್ತುಗಳ ಸರಕನ್ನು ಹೊಂದಿರುವ ಹಡುಗಳು ಅಲ್ಲಿಂದ ಹೊರಡಲು ಅವಕಾಶ ನೀಡಲು ತಾವು ಸಿದ್ಧ. ಆದರೆ ಇದಕ್ಕೆ ಷರತ್ತುಗಳು ಅನ್ವಯಿಸಲಿದೆ ಎಂದು ರಶ್ಯದ ಸಹಾಯಕ ವಿದೇಶಾಂಗ ಸಚಿವ ಆಂಡ್ರೈ ರುಡೆಂಕೊ ಹೇಳಿದ್ದಾರೆ.
ತನ್ನ ಮೇಲೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿದರೆ ಉಕ್ರೇನ್ ಬಂದರಿನಿಂದ ಹಡಗುಗಳು ಹೊರಡಲಿವೆ. ಆಹಾರ ವಸ್ತುಗಳ ಸರಕು ಹೊತ್ತಿರುವ ಹಡಗುಗಳ ಪ್ರಯಾಣಕ್ಕೆ ರಶ್ಯ ಮಾನವೀಯ ಕಾರಿಡಾರ್ ವ್ಯವಸ್ಥೆ ಮಾಡಲಿದೆ ಎಂದವರು ಹೇಳಿದ್ದಾರೆ. ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದಂದಿನಿಂದ ಕಪ್ಪು ಸಮುದ್ರದಲ್ಲಿರುವ ಉಕ್ರೇನ್‌ನ ಬಂದರುಗಳನ್ನು ರಶ್ಯ ತಡೆಹಿಡಿದಿದೆ. ಕಪ್ಪು ಸಮುದ್ರದಲ್ಲಿ ನೌಕಾದಳವನ್ನು ನಿಯೋಜಿಸಿರುವ ರಶ್ಯ, ಉಕ್ರೇನ್‌ನ ಬಂದರಿನಿಂದ ಯಾವುದೇ ವಾಣಿಜ್ಯ ಹಡಗುಗಳು ಹೊರ ತೆರಳುವುದನ್ನು ಪರಿಣಾಮಕಾರಿಯಾಗಿ ತಡೆಹಿಡಿದಿದೆ.
ವರದಿಯ ಪ್ರಕಾರ, ವಿಶ್ವದ ಆಹಾರದ ಬಾಸ್ಕೆಟ್ ಎಂದು ಕರೆಯಲಾಗುವ ಉಕ್ರೇನ್‌ನ ಗೋದಾಮುಗಳಲ್ಲಿ 20 ಮಿಲಿಯನ್ ಟನ್‌ಗೂ ಅಧಿಕ ಆಹಾರ ಧಾನ್ಯಗಳು ರಾಶಿಬಿದ್ದಿವೆ. ಉಕ್ರೇನ್‌ನಿಂದ ರಫ್ತಾಗುವ ಆಹಾರ ಧಾನ್ಯಗಳನ್ನು ಅವಲಂಬಿಸಿರುವ ದೇಶಗಳಲ್ಲಿ ಈಗ ಆಹಾರದ ಬಿಕ್ಕಟ್ಟಿನ ಸಮಸ್ಯೆ ತೀವ್ರಗೊಂಡಿದೆ. ಉಕ್ರೇನ್ ಯುದ್ಧ ಶೀಘ್ರ ಅಂತ್ಯಗೊಳ್ಳದಿದ್ದರೆ ಜಾಗತಿಕ ಆಹಾರ ಬಿಕ್ಕಟ್ಟು ಪರಾಕಾಷ್ಟೆಗೆ ತಲುಪಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಕಪ್ಪು ಸಮುದ್ರದ ಬಂದರಿನಿಂದ ಆಹಾರ ಧಾನ್ಯಗಳನ್ನು ಹೊತ್ತ ಹಡಗುಗಳು ಹೊರಡುವುದಕ್ಕೆ ತಡೆಯೊಡ್ಡುವ ಮೂಲಕ ರಶ್ಯ ಅಧ್ಯಕ್ಷ ಪುಟಿನ್, ಮಿಲಿಯಾಂತರ ಜನರನ್ನು ಕ್ಷಾಮದ ದವಡೆಗೆ ನೂಕುತ್ತಿದ್ದಾರೆ ಎಂದು ಜಿ7 ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ.
ಆಹಾರ ಸಮಸ್ಯೆಯ ಪರಿಹಾರಕ್ಕೆ ರಶ್ಯಾದ ರಫ್ತು ಮತ್ತು ಹಣಕಾಸಿನ ವಹಿವಾಟಿನ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕುವುದು ಸೇರಿದಂತೆ ಸಮಗ್ರ ವಿಧಾನದ ಅಗತ್ಯವಿದೆ ಎಂದು ನಾವು ಪದೇಪದೇ ಹೇಳುತ್ತಿದ್ದೇವೆ. ಜತೆಗೆ, ಹಡಗುಗಳು ಲಂಗರು ಹಾಕಿರುವ ಬಂದರಿನಲ್ಲಿ ಉಕ್ರೇನ್ ಹುಗಿದಿಟ್ಟಿರುವ ಸ್ಫೋಟಕಗಳನ್ನೂ ತೆರವುಗೊಳಿಸಬೇಕಾಗಿದೆ. ಅಗತ್ಯವಾದ ಮಾನವೀಯ ಮಾರ್ಗಗಳನ್ನು ಒದಗಿಸಲು ರಶ್ಯ ಸಿದ್ಧವಿದೆ ಮತ್ತು ಇದನ್ನು ಪ್ರತೀ ದಿನವೂ ಮಾಡುತ್ತಿದೆ ಎಂದು ರಶ್ಯದ ವಿದೇಶಾಂಗ ಸಚಿವರು ಹೇಳಿರುವುದಾಗಿ ಇಂಟರ್‌ಫಾಕ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.