ಇರಾನ್: ಬಹುಮಹಡಿ ಕಟ್ಟಡ ಕುಸಿತ: ಮೃತರ ಸಂಖ್ಯೆ 18ಕ್ಕೆ ಏರಿಕೆ
ಟೆಹ್ರಾನ್, ಮೇ 26: ನೈಋತ್ಯ ಇರಾನ್‌ನಲ್ಲಿ ಬಹುಮಹಡಿ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದ್ದು 37 ಮಂದಿಯನ್ನು ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿಯಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಖುಜೆಸ್ತಾನ್ ಪ್ರಾಂತದ ಅಬಾದಾನ್ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ 10 ಮಹಡಿ ಕಟ್ಟಡದ ಟವರ್‌ಬ್ಲಾಕ್ ಸೋಮವಾರ ಕುಸಿದು ಈ ದುರಂತ ಸಂಭವಿಸಿದೆ. ಕಟ್ಟಡದ ಅವಶೇಷಗಳಡಿ ಇದುವರೆಗೆ 18 ಮೃತದೇಹ ಪತ್ತೆಯಾಗಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ನಗರದ ಗವರ್ನರ್ ಎಹ್ಸಾನ್ ಅಬ್ಬಾಸ್‌ಪೌರ್ ಹೇಳಿದ್ದಾರೆ.
ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿಯಿಂದ ಇದುವರೆಗೆ 37 ಮಂದಿಯನ್ನು ರಕ್ಷಿಸಲಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ. ಈ ಕಟ್ಟಡದ ಸನಿಹದಲ್ಲಿರುವ ಇತರ ಕಟ್ಟಡಗಳಿಗೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಮುಂದುವರಿದಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದ ಮೇಯರ್, ಇಬ್ಬರು ಮಾಜಿ ಮೇಯರ್ ಸಹಿತ 10 ಮಂದಿಯನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಆಂತರಿಕ ಸಚಿವ ಅಹ್ಮದ್ ವಹೀದಿ ಹೇಳಿದ್ದಾರೆ.