ಸಾಮೂಹಿಕ ಅತ್ಯಾಚಾರ ಆರೋಪಿ ಪೊಲೀಸ್ ಗುಂಡಿನಿಂದ ಗಾಯ

ಕೊಕ್ರಾಜರ್, ಮೇ 26: ಅಸ್ಸಾಮ್‌ನ ಕೊಕ್ರಾಜರ್ ಜಿಲ್ಲೆಯಲ್ಲಿ ನಡೆದ ಬಾಲಕಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬ ಗುರುವಾರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದು, ಗಾಯಗೊಂಡಿದ್ದಾನೆ.
ಆರೋಪಿಯು ಸೋಮವಾರ ರಾತ್ರಿ ಇತರ ಇಬ್ಬರೊಂದಿಗೆ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ ಹಾಗೂ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಅವನನ್ನು ಪೊಲೀಸರು ಬಂಧಿಸಿದ್ದು, ಮೊಬೈಲನ್ನು ಅಡಗಿಸಿಟ್ಟ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು ಎಂದು ಹೆಚ್ಚುವರಿ ಎಸ್‌ಪಿ ಎಸ್.ಎಸ್. ಪನೆಸಾರ್ ಹೇಳಿದರು.
‘‘ಅವರು ದೊಲ್ಮಾರ ರಾಣಿಪುರ ಚಹಾ ತೋಟವನ್ನು ಸಮೀಪಿಸುತ್ತಿದ್ದಂತೆ ಆರೋಪಿಯು ಪೊಲೀಸರಿಗೆ ಸ್ಥಳವನ್ನು ತೋರಿಸುತ್ತಿದ್ದನು. ಅವನು ಒಮ್ಮೆಲೆ ತಿರುಗಿ ಪೊಲೀಸ್ ಅಧಿಕಾರಿಯೊಬ್ಬರ ಸರ್ವಿಸ್ ರಿವಾಲ್ವರನ್ನು ಕಸಿದು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಲು ಯತ್ನಿಸಿದನು. ಆಗ ಇನ್ನೋರ್ವ ಪೊಲೀಸ್ ಅಧಿಕಾರಿ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಆರೋಪಿಯತ್ತ ಗುಂಡು ಹಾರಿಸಿದರು. ಆರೋಪಿಯ ಕಾಲಿಗೆ ಗುಂಡು ತಗಲಿದ್ದು ಗಾಯಗೊಂಡಿದ್ದಾನೆ’’ ಎಂದು ಅವರು ತಿಳಿಸಿದರು.
ಕಳೆದ ವರ್ಷದ ಮೇ ತಿಂಗಳಲ್ಲಿ ಹಿಮಂತ ಬಿಸ್ವ ಶರ್ಮ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಥವಾ ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಪೊಲೀಸರು ಹಾರಿಸಿದ ಗುಂಡಿನಲ್ಲಿ ಕನಿಷ್ಠ 47 ಮಂದಿ ಮೃತಪಟ್ಟಿದ್ದಾರೆ ಮತ್ತು 115 ಮಂದಿ ಗಾಯಗೊಂಡಿದ್ದಾರೆ.







