ಜಮ್ಮುಕಾಶ್ಮೀರ: ಯಾಸೀನ್ ಮಲಿಕ್ ಬೆಂಬಲಿಸಿ ರ್ಯಾಲಿ; 10 ಮಂದಿಯ ಬಂಧನ

ಶ್ರೀನಗರ, ಮೇ 26: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ನೀಡಿರುವುದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಘೋಷಣೆ ಕೂಗಿದ ಹಾಗೂ ಕಲ್ಲು ತೂರಾಟ ನಡೆಸಿದ 10 ಮಂದಿಯನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಕಾಶ್ಮೀರದ ಶ್ರೀನಗರದಿಂದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಇನ್ನಷ್ಟು ಆರೋಪಿಗಳನ್ನು ಗುರುತಿಸಲಾಗುತ್ತಿದ್ದು, ಅವರನ್ನು ಕೂಡಲೇ ಬಂಧಿಸಲಾಗುವುದು. ಮಧ್ಯರಾತ್ರಿ ಹಲವು ಕಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಮುಖ್ಯ ಆರೋಪಿಯನ್ನು ಕೂಡ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆಗೆ ಉತ್ತೇಜನ ನೀಡಿದವರ ವಿರುದ್ಧ ಕೂಡ ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಜಮ್ಮು ಹಾಗೂ ಕಾಶ್ಮೀರದ ಹೊರಗಿರುವ ಕಾರಾಗೃಹದಲ್ಲಿ ಇರಿಸಲಾಗುವುದು ಎಂದು ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ ರಾಕೇಶ್ ಬಲ್ವಾಲ್ ತಿಳಿಸಿದ್ದಾರೆ.
‘‘ಶ್ರೀನಗರದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆಗೆ ಹಣಕಾಸಿನ ನೆರವು ಪ್ರಕರಣದ ಕುರಿತು ನ್ಯಾಯಾಲಯ ತೀರ್ಪು ನೀಡುವ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಬುಧವಾರ ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಈ ಸಂದರ್ಭ ಮೈಸುಮಾದಲ್ಲಿ ಜೆಕೆಎಲ್‌ಎಫ್ ಅಧ್ಯಕ್ಷ ಯಾಸೀನ್ ಮಲಿಕ್ ಬೆಂಬಲಿಗರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿತ್ತು.
ಮಹಿಳೆಯರು ಸೇರಿದಂತೆ ಹಲವರು ನಗರದ ಕೇಂದ್ರವಾದ ಲಾಲ್ ಚೌಕ್‌ನಿಂದ ಸ್ವಲ್ಪ ದೂರ ಇರುವ ಮೈಸುಮಾದಲ್ಲಿ ಯಾಸೀನ್ ಮಲಿಕ್ ನಿವಾಸದಲ್ಲಿ ಸೇರಿದ್ದರು. ಮಲಿಕ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದರು. ಪ್ರತಿಭಟನಕಾರರು ಈ ಪ್ರದೇಶದಲ್ಲಿ ಪ್ರತಿಭಟನಾ ರ್ಯಾಲಿ ಕೂಡ ನಡೆಸಿದ್ದರು.
ಕೆಲವು ಪ್ರತಿಭಟನಕಾರರು ಭದ್ರತಾ ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದರು. ಆದರೆ, ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







