ಭಟ್ಕಳ; ಮಹಿಳೆಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ತಾಲೂಕಿನ ತಲಾನ್ ಗುಡ್ಡದ ಮೇಲೆ ಮೇ 24ರಂದು ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಾಗರದ ಕಟ್ಟಿನಕಾರ ನಿವಾಸಿ ನಾರಾಯಣ ನಾಯ್ಕ ಹಾಗೂ ತಲಾಂದ ನಿವಾಸಿ ಮಂಜಪ್ಪ ನಾಯ್ಕ ಎಂದು ಗುರುತಿಸಲಾಗಿದೆ.
ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಅರೋಪಿಗಳನ್ನು ಪತ್ತೆ ಮಾಡಲಾಗಿದ್ದು ಮಹಿಳೆಯ ಗುರುತು ಪರಿಚಯ ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಮೇ 21ರಂದು ರಾತ್ರಿ 7.30ರ ಸುಮಾರಿಗೆ ಮಂಜಪ್ಪ ನಾಯ್ಕನ ಮನೆಗೆ ಆತನ ಅಣ್ಣನ ಮಗ ನಾಗಪ್ಪ ನಾಯ್ಕ ಆಟೋದಲ್ಲಿ ಓರ್ವ ಮಹಿಳೆಯನ್ನು ಕರೆದುಕೊಂಡು ಬಂದಿದ್ದು, ನಂತರ ಆಕೆಯನ್ನು ಕೊಲೆ ಮಾಡಿ ಗುಡ್ಡದ ಮೇಲೆ ಎಸೆದಿದ್ದರು. ಮೇ 24ರಂದು ಬೆಳಗ್ಗೆ ಆ ಭಾಗದಲ್ಲಿ ವಾಸನೆ ಬರುತ್ತಿದ್ದುದರಿಂದ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಗ್ರಾಮೀಣ ಸರ್ಕಲ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ಎಸ್.ಎನ್., ಪಿ.ಎಸ್.ಐ. ಭರತ ಕುಮಾರ್ ವಿ., ರತ್ನಾ ಎಸ್.ಕೆ., ಸಿಬ್ಬಂದಿಗಳಾದ ವಿನಾಯಕ ಪಾಟೀಲ, ಮಂಜುನಾಥ ಗೊಂಡ, ದೀಪಕ್ ಎಸ್. ನಾಯ್ಕ, ಮಹೇಶ ಪಟಗಾರ, ರಾಜು ಗೌಡ, ವಿನಾಯಕ ನಾಯ್ಕ, ರೇಣುಕಾ ಹೊನ್ನಿಕೋಳ, ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ಸುನಿಲ್ ಬಿ.ವೈ., ಮಂಜುನಾಥ ಪಾಟೀಲ್ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ತನಿಖೆಗೆ ಮಾರ್ಗದರ್ಶನ ನೀಡಿದ್ದರು.







