ಶಾಲೆಗೆ ದಾನವಾಗಿ ಬಂದ ಜಾಗ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಜಿಲ್ಲಾಡಳಿತ ಹುನ್ನಾರ: ದಸಂಸ ಆರೋಪ
ಜಾಗ ಹಸ್ತಾಂತರಿಸಿದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಹೋರಾಟದ ಎಚ್ಚರಿಕೆ
ಚಿಕ್ಕಮಗಳೂರು, ಮೇ 26: ಸರಕಾರಿ ಶಾಲೆಗೆ ದಾನಿಯೊಬ್ಬರು ನೀಡಿದ 6 ಎಕರೆ ಜಾಗವನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಗೆ ನೇಚರ್ ಕ್ಯಾಂಪ್‍ನಂತಹ ಮೋಜು ಮಸ್ತಿ ಮಾಡುವ ಉದ್ದೇಶಕ್ಕೆ ನೀಡಲು ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದ್ದು, ದಾನಿಗಳು ನೀಡಿದ ಜಾಗವನ್ನು ಸರಕಾರಿ ಶಾಲೆಯ ಅಭಿವೃದ್ಧಿ ಉದ್ದೇಶಕ್ಕೆ ಮಾತ್ರ ಬಳಸಬೇಕು. ತಪ್ಪಿದಲ್ಲಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲಾದ್ಯಂತ ನೂರಾರು ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುತ್ತಿದೆ. ಇಂತಹ ಶಾಲೆಗಳ ಅಭಿವೃದ್ಧಿಗೆ ಸರಕಾರ ಇಂದಿಗೂ ನಿರ್ಲಕ್ಷ್ಯವಹಿಸಿದೆ. ಅನೇಕ ಶಾಲೆಗಳಿಗೆ ಆಟದ ಮೈದಾನಗಳೇ ಇಲ್ಲವಾಗಿದ್ದು, ಜಿಲ್ಲಾಡಳಿತದಿಂದ ಶಾಲೆಗಳಿಗೆ ಆಟದ ಮೈದಾನಕ್ಕೆ ಜಾಗ ನೀಡಲೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಭದ್ರಾ ಅಭಯಾರಣ್ಯದ ಸಮೀಪದಲ್ಲಿರುವ ಸಿರವಾಸೆಯ ಹೊನ್ನಾಳ ಗ್ರಾಮದಲ್ಲಿರುವ ಸರಕಾರಿ ಶಾಲೆಗೆ 1956ರಲ್ಲಿ ಬಿ.ಎಂ.ಮಾರ್ಟಿನ್ ಎಂಬವರು 6.10 ಎಕರೆ ಜಾಗವನ್ನು ದಾನವಾಗಿ ಬರೆದು ಕೊಟ್ಟಿದ್ದಾರೆ. ಆದರೆ ಈ ಜಾಗವನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಗೆ ನೇಚರ್ ಕ್ಯಾಂಪ್ ಉದ್ದೇಶಕ್ಕೆ ಹಸ್ತಾಂತರಿಸಲು ಮುಂದಾಗಿದೆ, ಇದು ಖಂಡನೀಯ ಎಂದರು.
ಈ ಜಾಗವನ್ನು ನೇಚರ್ ಕ್ಯಾಂಪ್ ಉದ್ದೇಶಕ್ಕೆ ನೀಡಬಾರದು ಎಂದು ಶಾಲೆಯ ಎಸ್‍ಡಿಎಂಸಿ ಸಮಿತಿ ನಿರ್ಣಯ ಕೈಗೊಂಡಿದೆ. ಸ್ಥಳೀಯರು ಜಿಲ್ಲಾಡಳಿತದ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ಆದೇಶಿಸಿದೆ. ಆದರೂ ಜಿಲ್ಲಾಡಳಿತ ಇತ್ತೀಚೆಗೆ ಸ್ಥಳೀಯ ಕಂದಾಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಜಾಗದ ಸರ್ವೆ ಕಾರ್ಯ ನಡೆಸಿದ್ದಾರೆ. ಜಾಗವನ್ನು ನೇಚರ್ ಕ್ಯಾಂಪ್‍ಗೆ ನೀಡುವ ಮೂಲಕ ಶ್ರೀಮಂತರ ಮೋಜು ಮಸ್ತಿಗೆ ಅವಕಾಶ ನೀಡಲಾಗುತ್ತಿದೆ ಎಂದ ಅವರು, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಕೂಡ ಈ ಜಾಗವನ್ನು ನೇಚರ್ ಕ್ಯಾಂಪ್‍ಗೆ ನೀಡಬಾರದೆಂದು ಪತ್ರ ನೀಡಿದ್ದು, ಜಿಲ್ಲಾಡಳಿತ ಇದಕ್ಕೂ ಬೆಲೆ ನೀಡದೇ ಜಾಗ ಹಸ್ತಾಂತರ ಮಾಡಲು ಮುಂದಾಗಿರುವುದು ಜಿಲ್ಲಾಡಳಿತ ಜನವಿರೋಧಿ ನಿಲುವಾಗಿದೆ ಎಂದು ಆರೋಪಿಸಿದರು.
ಹೊನ್ನಾಳ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಬಡವರು, ಕಾರ್ಮಿಕರು, ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನವೂ ಇಲ್ಲ. ಶಾಲೆಗೆ ದಾನವಾಗಿ ಬಂದಿರುವ ಜಾಗವನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬಾರದು. ಜಾಗವನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದ ಅವರು, ಜನರ ವಿರೋಧದ ನಡುವೆಯೂ ಜಾಗವನ್ನು ಹಸ್ತಾಂತರ ಮಾಡಲು ಮುಂದಾದಲ್ಲಿ ಜಿಲ್ಲಾಡಳಿತದ ವಿರುದ್ಧ ಧರಣಿ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ದಸಂಸ ಮುಖಂಡ ಮಾಡ್ಲಾ ಎಂ.ಎಸ್.ಶೇಖರ್ ಮಾತನಾಡಿ, 2000-2001ನೇ ಸಾಲಿನಲ್ಲಿ ಭದ್ರಾ ಹುಲಿ ಯೋಜನೆಗೆ 58 ಮಂದಿ ತಮ್ಮ ಜಮೀನು, ಮನೆಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಪೈಕಿ 9 ಮಂದಿಗೆ ಜಮೀನು ಹಕ್ಕುಪತ್ರಗಳನ್ನು ನೀಡಲಾಗಿದೆಯಾದರೂ ಇದುವರೆಗೂ ಸಂತ್ರಸ್ಥರಿಗೆ ಜಿಲ್ಲಾಡಳಿತ ಜಮೀನು, ಪರಿಹಾರಧನ ಸೇರಿದಂತೆ ಯಾವುದೇ ಪರಿಹಾರ ನೀಡಿಲ್ಲ. ಈ ಸಂಬಂಧ ಅನೇಕ ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ನ್ಯಾಯಾಲಯದ ಆದೇಶ ಇದ್ದರೂ ಜಿಲ್ಲಾಡಳಿತ ಜಮೀನು ನೀಡಲು ವಿಫಲವಾಗಿದೆ. ಕೂಡಲೇ ಸಂತ್ರಸ್ಥರಿಗೆ ಜಮೀನು ಗುರುತಿಸಿ ಹಸ್ತಾಂತರ ಮಾಡಬೇಕು. ಜಿಲ್ಲಾಡಳಿತ ಶ್ರೀಮಂತ ಬೆಳೆಗಾರರು ಒತ್ತುವರಿ ಮಾಡಿರುವ ಜಮೀನನ್ನು ಒತ್ತುವರಿದಾರರಿಗೆ ಗುತ್ತಿಗೆ ನೀಡಲು ಮುಂದಾಗಿದ್ದು, ಇಂತಹ ಜಮೀನನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದು ಅರಣ್ಯ ಯೋಜನೆಗಳ ಸಂತ್ರಸ್ಥರು, ಭೂರಹಿತರಿಗೆ ಹಂಚಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಶ್ರೀಮಂತರಿಗೆ ಸರಕಾರಿ ಜಮೀನನ್ನು ಗುತ್ತಿಗೆ ನೀಡಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಪತ್, ವೆಂಕಟೇಶ್ ಉಪಸ್ಥಿತರಿದ್ದರು.







