ಸಾಕು ನಾಯಿಯೊಂದಿಗೆ ವಾಯುವಿಹಾರ, ವಿವಾದ: ಐಎಎಸ್ ಅಧಿಕಾರಿ ವರ್ಗಾವಣೆ

ಹೊಸದಿಲ್ಲಿ: ಐಎಎಸ್ ಅಧಿಕಾರಿ ತಮ್ಮ ಸಾಕು ನಾಯಿಯೊಂದಿಗೆ ವಾಯುವಿಹಾರ ನಡೆಸುವ ಸಲುವಾಗಿ ಸ್ಟೇಡಿಯಂ ಖಾಲಿ ಮಾಡಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದಿತ ಐಎಎಸ್ ಅಧಿಕಾರಿಯನ್ನು ಲಡಾಖ್‍ಗೆ ವರ್ಗಾಯಿಸಲಾಗಿದೆ.
ಸರ್ಕಾರಿ ನಿರ್ವಹಣೆಯ ತ್ಯಾಗರಾಜ ಸ್ಟೇಡಿಯಂ ಅನ್ನು, ಅಧಿಕಾರಿಗೆ ಶ್ವಾನದೊಂದಿಗೆ ವಾಯುವಿಹಾರ ನಡೆಸುವ ಸಲುವಾಗಿ ಅವಧಿಗಿಂತ ಮುನ್ನವೇ ಮುಚ್ಚಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
"1994ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಸಂಜೀವ್ ಖೀರ್ವಾರ್ ಅವರನ್ನು ಲಡಾಖ್‍ಗೆ ಮತ್ತು ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ" ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.
ಖೀರ್ವಾರ್ ಮತ್ತು ಅವರ ಪತ್ನಿ ತ್ಯಾಗರಾಜ ಸ್ಟೇಡಿಯಂನ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ವರದಿ ಸಲ್ಲಿಸುವಂತೆ ಗೃಹ ಸಚಿವಾಲಯ, ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿತ್ತು ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿ ಗುರುವಾರ ಸಂಜೆ ವರದಿ ಸಲ್ಲಿಸಿದ್ದು, ಇದನ್ನು ಆಧರಿಸಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಪ್ರಸ್ತುತ ಖೀರ್ವಾರ್, ದೆಹಲಿಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು, ಎಲ್ಲ ಸರ್ಕಾರಿ ಸೌಲಭ್ಯಗಳು ರಾತ್ರಿ 10ರ ವರೆಗೆ ಮುಕ್ತವಾಗಿ ಇರಬೇಕು ಎಂದು ಆದೇಶಿಸಿದ್ದರು.







