ಅಸ್ಸಾಂ ಪ್ರವಾಹ; 30ಕ್ಕೇರಿದ ಸಾವಿನ ಸಂಖ್ಯೆ

ಗುವಾಹತಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗುರುವಾರ ಕೂಡಾ ಗಂಭೀರವಾಗಿದ್ದು, ಮಗು ಸೇರಿದಂತೆ ಮತ್ತೆರಡು ಜನ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 30ಕ್ಕೇರಿದ್ದು, ಏಳು ಜಿಲ್ಲೆಗಳ 5.61 ಲಕ್ಷ ಜನ ಇನ್ನೂ ಪ್ರವಾಹ ಸಂತ್ರಸ್ತರಾಗಿ ಮುಂದುವರಿದಿದ್ದಾರೆ.
ನಾಗೋನ್ ಜಿಲ್ಲೆಯ ಕಾಂಪುರ ಮತ್ತು ರಹಾ ಎಂಬಲ್ಲಿ ತಲಾ ಒಬ್ಬರು ಪ್ರವಾಹಕ್ಕೆ ಬಲಿಯಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರದ ದೈನಿಕ ಬುಲೆಟಿನ್ ಹೇಳಿದೆ.
5,61,100 ಮಂದಿ ಕಚಾರ್, ದಿಮಾ ಹಸ್ಸೊ, ಹೈಕಲಂಡಿ, ಹಜೋಯಿ, ಕಾರ್ಬಿ ಅಂಗ್ಲಾಂಗ್ ಪಶ್ಚಿಮ, ಮೊರಿಗಾಂವ್ ಮತ್ತು ನಾಗೋನ್ ಜಿಲ್ಲೆಗಳಲ್ಲಿ ಪ್ರವಾಹ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದೆ.
ಅತ್ಯಂತ ಸಂಕಷ್ಟಕ್ಕೀಡಾಗಿರುವ ನಾಗೋನ್ ಜಿಲ್ಲೆಯೊಂದರಲ್ಲೇ 3.68 ಲಕ್ಷ ಮಂದಿ ಬಾಧಿತರಾಗಿದ್ದಾರೆ. ಕಚಾರ್ ನಲ್ಲಿ ಸುಮಾರು 1.5 ಲಕ್ಷ ಹಾಗು ಮೊರಿಗಾಂವ್‍ನಲ್ಲಿ 41 ಸಾವಿರ ಮಂದಿ ಪ್ರವಾಹ ಸಂಕಷ್ಟಕ್ಕೆ ಈಡಾಗಿದ್ದಾರೆ. ಮಂಗಳವಾರದವರೆಗೆ 5.75 ಮಂದಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೀಡಾಗಿದ್ದರು.
ಅಂತರ ಸಚಿವಾಲಯ ಕೇಂದ್ರ ತಂಡ ಗುರುವಾರ ಗುವಾಹತಿ ತಲುಪಿದ್ದು, ಕಂದಾಯ ಹಾಗೂ ವಿಕೋಪ ನಿರ್ವಹಣೆ ಇಲಾಖೆ ಜತೆ ಮಾತುಕತೆ ನಡೆಸಿದ್ದು, ಪ್ರವಾಹ ಹಾನಿ ಅಂದಾಜಿಸುವಿಕೆಯಲ್ಲಿ ತೊಡಗಿದೆ.







