ಫ್ರೆಂಚ್ ಓಪನ್: ಅಲ್ಕರಾಝ್, ಝ್ವೆರೆವ್, ನಡಾಲ್, ಜೊಕೊವಿಕ್ ಜಯಭೇರಿ
ಪ್ಯಾರಿಸ್, ಮೇ 26: ಸ್ಪೇನ್‌ನ ಕಿರಿಯ ಆಟಗಾರ ಕಾರ್ಲೊಸ್ ಅಲ್ಕ್ಕರಾಝ್ ಹಾಗೂ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಫ್ರೆಂಚ್‌ಓಪನ್‌ನಲ್ಲಿ ಐದು ಸೆಟ್‌ಗಳ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದರು. 13 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ 4 ಗಂಟೆ ಹಾಗೂ 34 ನಿಮಿಷಗಳ ಕಾಲ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಪ್ರಶಸ್ತಿ ಸ್ಪರ್ಧಿಗಳ ಪೈಕಿ ಒಬ್ಬರಾಗಿರುವ ಅಲ್ಕರಾಝ್ ಸ್ಪೇನ್‌ನ ಅಲ್ಬರ್ಟ್ ರಾಮೊಸ್-ವಿನೊಲಸ್‌ರನ್ನು 6-1, 6-7(7/9), 5-7, 7-6(7/2), 6-4 ೆಟ್‌ಗಳ ಅಂತರದಿಂದ ಸೋಲಿಸಿದರು.
‘‘ನನಗೆ ದಣಿವಾದಂತೆ ಭಾಸವಾಗುತ್ತಿದೆ. ಇದೊಂದು ಭಾರೀ ಹಣಾಹಣಿಯಾಗಿತ್ತು. ಉತ್ತಮ ಪಂದ್ಯವಾಗಿತ್ತು. ನಾವು ಕೊನೆಯ ಪಾಯಿಂಟ್ ತನಕ ಸೆಣಸಾಡಿದೆವು’’ ಎಂದು ಅಲ್ಕರಾಝ್ ಹೇಳಿದ್ದಾರೆ.
19ರ ಹರೆಯದ ಅಲ್ಕ್ಕರಾಝ್ ಪುರುಷರ ಸಿಂಗಲ್ಸ್‌ನಲ್ಲಿ ಪ್ರಮುಖ ಪ್ರಶಸ್ತಿ ಜಯಿಸಿದ 8ನೇ ಯುವ ಆಟಗಾರನಾಗುವ ಪ್ರಯತ್ನದಲ್ಲಿದ್ದಾರೆ. ಅಲ್ಕ್ಕರಾಝ್ ಮುಂದಿನ ಸುತ್ತಿನಲ್ಲಿ ಅಮೆರಿಕದ 27ನೇ ಶ್ರೇಯಾಂಕದ ಸೆಬಾಸ್ಟಿುನ್ ಕೊರ್ಡಾರನ್ನು ಎದುರಿಸಲಿದ್ದಾರೆ.
2021ರ ಸೆಮಿ ಫೈನಲಿಸ್ಟ್ ಅಲೆಕ್ಸಾಂಡರ್ ಝ್ವೆರೆವ್ ಮೊದಲೆರಡು ಸೋಲಿನಿಂದ ಚೇತರಿಸಿಕೊಂಡು ಅರ್ಜೆಂಟೀನದ ಸೆಬಾಸ್ಟಿಯನ್ ಬಾಯೆಝ್ ವಿರುದ್ಧ 2-6, 4-6, 6-1, 6-2, 7-5 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಸುತ್ತಿನಲ್ಲಿ ಅಮೆರಿಕದ ಬ್ರೆಂಡನ್ ನಕಶಿಮಾರನ್ನು ಎದುರಿಸಲಿದ್ದಾರೆ.
ಝ್ವೆರೆವ್ ವೃತ್ತಿಜೀವನದಲ್ಲಿ ಮೂರನೇ ಬಾರಿ ಮೊದಲೆರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡಿದ್ದಾರೆ. ವರ್ಷದ ಹಿಂದೆ ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಜರ್ಮನಿಯ ಆಸ್ಕರ್ ವಿರುದ್ಧ 2-0 ಹಿನ್ನಡೆಯಿಂದ ಚೇತರಿಸಿಕೊಂಡು ಜಯ ಸಾಧಿಸಿದ್ದರು.
ಗ್ರ್ಯಾನ್‌ಸ್ಲಾಮ್‌ನಲ್ಲಿ 300ನೇ ಗೆಲುವು ದಾಖಲಿಸಿದ ರಫೆಲ್ ನಡಾಲ್
ಹಿರಿಯ ಆಟಗಾರ ರಫೆಲ್ ನಡಾಲ್ ಫ್ರಾನ್ಸ್‌ನ ವೈರ್ಲ್ಡ್‌ಕಾರ್ಡ್ ಆಟಗಾರ ಕೊರೆಂಟಿನ್ ವೌಟೆಟ್‌ರನ್ನು 6-3, 6-1, 6-4 ನೇರ ಸೆಟ್‌ಗಳ ಅಂತರದಿಂದ ಸೋಲಿಸುವುದರೊಂದಿಗೆ ತನ್ನ ವೃತ್ತಿಬದುಕಿನಲ್ಲಿ 300ನೇ ಗ್ರಾನ್‌ಸ್ಲಾಮ್ ಗೆಲುವು ದಾಖಲಿಸಿದರು. 21 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಎನಿಸಿಕೊಳ್ಳುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿರುವ ನಡಾಲ್‌ಗಿಂತ ರೋಜರ್ ಫೆಡರರ್(369) ಹಾಗೂ ಜೊಕೊವಿಕ್(325)ಹೆಚ್ಚು ಗೆಲುವು ಸಂಪಾದಿಸಿದ್ದಾರೆ.
ಇದೇ ವೇಳೆ, ವಿಶ್ವದ ನಂ.1 ಆಟಗಾರ ಜೊಕೊವಿಕ್ ಸ್ಲೋವಾಕಿಯದ ಅಲೆಕ್ಸ್ ಮಾಲ್ಕಾನ್‌ರನ್ನು 6-2, 6-3, 7-6(7/4)ಸೆಟ್‌ಗಳ ಅಂತರದಿಂದ ಸೋಲಿಸಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು. 3ನೇ ಫ್ರೆಂಚ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಗ್ರ ಶ್ರೇಯಾಂಕದ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಸ್ಲೋವಾನಿಯದ ಅಲಿಜಾಝ್ ಬೆಡೆನ್‌ರನ್ನು ಎದುರಿಸಲಿದ್ದಾರೆ.