ಬ್ರಹ್ಮಾವರ: ಪಿಪಿಸಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಸಮಾರೋಪ

ಬ್ರಹ್ಮಾವರ : ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಘಟಕವು ಒಂದು ವಾರದ ವಾರ್ಷಿಕ ಶಿಬಿರವನ್ನು ನೀಲಾವರ ಗೋಶಾಲೆಯಲ್ಲಿ ಹಮ್ಮಿಕೊಂಡಿತ್ತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಾವರ ತಾಲೂಕಿನ ತಹಶೀಲ್ದಾರ್ ರಾಜಶೇಖರ ಮೂರ್ತಿ, ಉಡುಪಿ ಜಿಲ್ಲೆಯ ಎನ್ನೆಸ್ಸೆಸ್‌ನ ನೋಡಲ್ ಅಧಿಕಾರಿ ಪ್ರವೀಣ್ ಶೆಟ್ಟಿ, ಬ್ರಹ್ಮಾವರ ತಾಪಂನ ಮಾಜಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿದ್ದರು.
ತಹಶೀಲ್ದಾರ್ ರಾಜಶೇಖರ್ ಮೂರ್ತಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ರಾಜಕೀಯದಲ್ಲಿ ಯುವಕರು ಪಾಲ್ಗೊಳ್ಳಲು ಹಿಂದೆ ಸರಿಯುತ್ತಿದ್ದಾರೆ. ಪ್ರತಿಯೊಬ್ಬರು ಅದರಲ್ಲೂ ಯುವಕರು ರಾಜಕೀಯದಲ್ಲಿ ಹೆಚ್ಚು ಒಲವು ತೋರಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಮಾತನಾಡಿ, ಶಿಬಿರದಲ್ಲಿ ಸುಮಾರು ಎರಡು ಎಕರೆಗೆ ಜೋಳದ ಕಡಿಯನ್ನು ನಾಟಿ ಮಾಡಲಾಗಿದೆ. ಗೋಶಾಲೆಯ ಇಡೀ ಆವರಣವನ್ನೂ ಸ್ವಚ್ಛಗೊಳಿಸಲಾಗಿದೆ. ಅಲ್ಲದೇ ಶಿಬಿರಾರ್ಥಿ ಗಳು ಗ್ರಾಮ ಸಮೀಕ್ಷೆಯ ಮೂಲಕ ಗ್ರಾಮೀಣ ಜನರ ಬದುಕನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಸುಪರ್ಣ ಸ್ವಾಗತಿಸಿದರು. ಸಂದೀಪ್ ವಂದಿಸಿ, ಸಹಯೋಜ ನಾಧಿಕಾರಿ ಡಾ. ನಾಗರಾಜ ಜಿ.ಪಿ. ನಿರೂಪಿಸಿದರು.