ಪೂರ್ವ ಟಿಮೋರ್ ನಲ್ಲಿ ಪ್ರಬಲ ಭೂಕಂಪ: ಹಿಂದು ಮಹಾಸಾಗರದಲ್ಲಿ ಸುನಾಮಿ ಸಾಧ್ಯತೆ; ವಿಶ್ವಸಂಸ್ಥೆ
ದಿಲಿ, ಮೇ 27: ಶುಕ್ರವಾರ ಪೂರ್ವ ಟಿಮೋರ್ನ ಕರಾವಳಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಆಸ್ಟ್ರೇಲಿಯಾದ ಡಾರ್ವಿನ್ ನಗರದವರೆಗೂ ಕಂಪನದ ಅನುಭವವಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಇಲಾಖೆ(ಯುಎಸ್ಜಿಎಸ್) ಹೇಳಿದೆ.
ಭೂಕಂಪದಿಂದ ಹಿಂದು ಮಹಾಸಾಗರ ಪ್ರದೇಶದ ಮೇಲೆ ಪರಿಣಾಮ ಬೀರುವ ಸುನಾಮಿ ಸೃಷ್ಟಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಸುನಾಮಿ ನಿಗಾ ಘಟಕ ಎಚ್ಚರಿಸಿದೆ. ಆದರೆ ಈ ಪ್ರದೇಶದಲ್ಲಿನ ಯಾವುದೇ ರಾಷ್ಟ್ರೀಯ ಪ್ರಾಧಿಕಾರ ಸುನಾಮಿಯ ಎಚ್ಚರಿಕೆ ನೀಡಿಲ್ಲ.
ನಾಶ ಅಥವಾ ಜೀವಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೂರ್ವ ಟಿಮೋರ್ ಮತ್ತು ಇಂಡೋನೇಶ್ಯಾದ ನಡುವೆ ವಿಭಜನೆಗೊಂಡಿರುವ ಟಿಮೋರ್ ದ್ವೀಪದ ಪೂರ್ವದಲ್ಲಿ 51 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ಜಿಎಸ್ ಹೇಳಿದೆ. ಪೂರ್ವ ಟಿಮೋರ್ನ ರಾಜಧಾನಿ ದಿಲಿ ನಗರದಲ್ಲಿ ಭೂಮಿ ಕಂಪಿಸಿದೆ. ಕೆಲ ಕ್ಷಣ ಮಾತ್ರ ಭೂಮಿ ಕಂಪಿಸಿದ್ದರೂ ಅದರ ತೀವ್ರತೆ ಹೆಚ್ಚಿತ್ತು. ಭೂಮಿ ನಡುಗಿದಾಗ ಮನೆಯೊಳಗೆ ಇದ್ದವರು ಮತ್ತು ಶಾಲೆಯೊಳಗೆ ಇದ್ದ ಮಕ್ಕಳು ಭೀತಿಯಿಂದ ಹೊರಗೋಡಿ ಬಂದರು ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಟಿಮೋರ್ ಸಮುದ್ರದ ಪಾತ್ರದಲ್ಲಿರುವ ಆಸ್ಟ್ರೇಲಿಯಾದ ಡಾರ್ವಿನ್ ನಗರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಉತ್ತರ ಇಂಡೊನೇಶ್ಯಾದಲ್ಲೂ ಭೂಮಿ ಕೆಲ ಹೊತ್ತು ಕಂಪಿಸಿದ್ದರಿಂದ ಆತಂಕಗೊಂಡ ಜನತೆ ತಮ್ಮ ಮನೆಯಿಂದ ಹೊರಗೋಡಿ ಬಂದರು ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಘಟಕ ಹೇಳಿದೆ. ಆಗ್ನೇಯ ಏಶ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶಾದ್ಯಂತ ವ್ಯಾಪಿಸಿರುವ ತೀವ್ರ ಭೂಕಂಪ ಚಟುವಟಿಕೆಯ ಪ್ರದೇಶ ‘ಪೆಸಿಫಿಕ್ ರಿಂಗ್ ಆಫ್ ಫೈಯರ್’ ವ್ಯಾಪ್ತಿಯಲ್ಲಿ ಪೂರ್ವ ಟಿಮೋರ್ ಮತ್ತು ಇಂಡೊನೇಶ್ಯಾ ದೇಶಗಳಿದ್ದು ಇಲ್ಲಿ ಆಗಾಗ ಭೂಕಂಪ ಸಂಭವಿಸುತ್ತದೆ.