ಇಸ್ರೇಲ್ ನಿಂದ ಪತ್ರಕರ್ತೆ ಶಿರೀನ್ ಉದ್ದೇಶಪೂರ್ವಕ ಹತ್ಯೆ: ತನಿಖಾ ವರದಿ
ರಮಲ್ಲಾ, ಮೇ 27: ಅಲ್ಜಝೀರಾದ ಪತ್ರಕರ್ತೆ ಶಿರೀನ್ರನ್ನು ಇಸ್ರೇಲ್ ಪಡೆ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೆಲೆಸ್ತೀನ್ ಅಧಿಕಾರಿಗಳು ಗುರುವಾರ ಘೋಷಿಸಿದ್ದಾರೆ.
2 ವಾರದ ಹಿಂದೆ ಪ್ರಕಟಿಸಿದ ಪ್ರಾಥಮಿಕ ತನಿಖಾ ವರದಿಯ ಫಲಿತಾಂಶವನ್ನೇ ಅಂತಿಮ ವರದಿಯೂ ಪ್ರತಿಧ್ವನಿಸಿದೆ. ಆದರೆ ವರದಿಯನ್ನು ತಳ್ಳಿಹಾಕಿರುವ ಇಸ್ರೇಲ್ನ ರಕ್ಷಣಾ ಸಚಿವ ಬೆನ್ನಿ ಗಾಂಟ್ಸ್, ಇದು ಮತ್ತೊಂದು ನಿರ್ಲಜ್ಜ ಸುಳ್ಳು ಎಂದಿದ್ದಾರೆ. ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಮೇ 11ರಂದು ಇಸ್ರೇಲ್ ಸೇನೆ ನಡೆಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆ ಸಂದರ್ಭ ಶಿರೀನ್ ಗುಂಡೇಟಿಗೆ ಬಲಿಯಾಗಿದ್ದರು. ಇಸ್ರೇಲ್ ಸೇನೆಯ ಗುಂಡಿನಿಂದ ಅವರು ಹತರಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹಾಗೂ ಪೆಲೆಸ್ತೀನ್ ಅಧಿಕಾರಿಗಳು ಹೇಳಿದ್ದರೆ, ಪೆಲೆಸ್ತೀನ್ ಬೆಂಬಲಿತ ಉಗ್ರ ಸಂಘಟನೆಯ ಗುಂಡೇಟಿನಿಂದ ಶಿರೀನ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರತಿಪಾದಿಸಿತ್ತು.
ಪಶ್ಚಿಮದಂಡೆಯ ರಮಲ್ಲಾ ನಗರದಲ್ಲಿ ಸುದ್ಧಿಗೋಷ್ಟಿಯಲ್ಲಿ ತನಿಖೆಯ ಫಲಿತಾಂಶ ಘೋಷಿಸಿದ ಪೆಲೆಸ್ತೀನ್ನ ಅಟಾರ್ನಿ ಜನರಲ್ ಅಕ್ರಮ್ ಅಲ್ ಖತೀಬ್, ಶಿರೀನ್ ಇದ್ದ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಸಂಘಟನೆಯ ಸದಸ್ಯರು ಇರಲಿಲ್ಲ. ಮತ್ತು ಆಕ್ರಮಿತ ಪಡೆ(ಇಸ್ರೇಲ್) ಮಾತ್ರ ಗುಂಡು ಹಾರಿಸಿರುವುದು ದೃಢಪಟ್ಟಿದೆ. ಶಿರೀನ್ ‘ಮಾಧ್ಯಮ’ ಎಂದು ಬರೆದಿದ್ದ ಜಾಕೆಟ್ ತೊಟ್ಟಿದ್ದರು ಹಾಗೂ ಹೆಲ್ಮೆಟ್ ಧರಿಸಿದ್ದರು. ಮಾಧ್ಯಮದ ವರದಿಗಾರ್ತಿ ಎಂದು ತಿಳಿದಿದ್ದರೂ ಇಸ್ರೇಲ್ ಪಡೆ ಅವರತ್ತ ಗುಂಡು ಹಾರಿಸಿದಾಗ ಅವರು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಆದರೆ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ, ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮತ್ತು ವಿಧಿವಿಜ್ಞಾನ ವೈದ್ಯಕೀಯ ವರದಿಯ ಆಧಾರದಲ್ಲಿ ತನಿಖೆ ನಡೆದಿದೆ ಎಂದವರು ಹೇಳಿದ್ದಾರೆ.
ಶಿರೀನ್ ದೇಹ ಹೊಕ್ಕಿದ್ದ ಬುಲೆಟ್ ಪ್ರಮುಖ ಸಾಕ್ಷಿಯಾಗಿದೆ. ಆದರೆ ಅದನ್ನು ಪರಿಶೀಲನೆಗೆಂದು ಇಸ್ರೇಲ್ಗೆ ಹಸ್ತಾಂತರಿಸುವುದಿಲ್ಲ. ಯಾಕೆಂದರೆ ಅವರು(ಇಸ್ರೇಲ್) ಮತ್ತೊಂದು ಸುಳ್ಳನ್ನು ಸೃಷ್ಟಿಸಬಹುದು ಎಂದು ಅಕ್ರಮ್ ಹೇಳಿದ್ದಾರೆ. ಬುಲೆಟ್ ಯಾರು ಹಾರಿಸಿದ್ದು ಎಂಬುದು ತಿಳಿದಿಲ್ಲ . ಅಲ್ಲಿ ಏನು ನಡೆದಿದೆ ಎಂಬುದನ್ನು ದೃಢಪಡಿಸಿಕೊಳ್ಳಬೇಕಿದ್ದರೆ ಪೆಲೆಸ್ತೀನೀಯರು ತಮ್ಮೊಂದಿಗೆ ಸಹಕರಿಸಬೇಕು. ಒಂದಂತೂ ಸತ್ಯ, ಯಾವುದೇ ಯೋಧ ಪತ್ರಕರ್ತರ ಮೇಲೆ ಗುಂಡು ಹಾರಿಸುವುದಿಲ್ಲ. ನಾವು ಅದನ್ನು ವಿಚಾರಣೆ ನಡೆಸಿ ಅಂತಿಮಗೊಳಿಸಿದ್ದೇವೆ. ಬೇರೇನೂ ಎಲ್ಲ ಎಂದು ಇಸ್ರೇಲ್ ಸೇನೆಯ ಮುಖ್ಯಸ್ಥ ಲೆ.ಜ ಅವೀವ್ ಕೊಹಾವಿ ಹೇಳಿದ್ದಾರೆ. ಅಮೆರಿಕದ ಪಾಲ್ಗೊಳ್ಳುವಿಕೆಯಲ್ಲಿ, ಪೆಲೆಸ್ತೀನ್ ಜತೆ ಜಂಟಿ ತನಿಖೆಗೆ ಸಿದ್ಧ ಎಂದು ಇಸ್ರೇಲ್ ಹೇಳಿದ್ದರೆ, ಜಂಟಿ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದು ಪೆಲೆಸ್ತೀನ್ ಪ್ರತಿಕ್ರಿಯಿಸಿದೆ.
ವರದಿಯ ಪ್ರತಿ ಅಮೆರಿಕಕ್ಕೆ
ತನಿಖಾ ವರದಿಯ ಪ್ರತಿಯನ್ನು ಅಮೆರಿಕಕ್ಕೆ ಒದಗಿಸಲಾಗುವುದು ಎಂದು ಆಕ್ರಮಿತ ಪಶ್ಚಿಮ ದಂಡೆಯ ಉನ್ನತ ಪೆಲೆಸ್ತೀನ್ ಅಧಿಕಾರಿ ಹುಸೈನ್ ಅಲ್ ಶೇಖ್ ಹೇಳಿದ್ದಾರೆ. ಅಲ್ಲದೆ ಅಲ್ಜಝೀರಾಕ್ಕೆ, ಶಿರೀನ್ ಅವರ ಕುಟುಂಬಕ್ಕೂ ವರದಿಯ ಪ್ರತಿಯನ್ನು ನೀಡಲಿದ್ದೇವೆ ಎಂದವರು ಹೇಳಿದ್ದಾರೆ.
ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಸಂಘಟನೆಗಳಿಗೂ ವರದಿಯನ್ನು ರವಾನಿಸಲಾಗುವುದು ಎಂದು ಪೆಲೆಸ್ತೀನ್ ಹೇಳಿದೆ. ಇಸ್ರೇಲ್ನ ಸಂಭಾವ್ಯ ಯುದ್ಧಾಪರಾಧದ ಬಗ್ಗೆ ಐಸಿಸಿ ಕಳೆದ ವರ್ಷ ವಿಚಾರಣೆ ಆರಂಭಿಸಿದೆ.