ಉಕ್ರೇನ್ ಸೇನಾ ನೆಲೆಗೆ ರಶ್ಯಾ ವಾಯುದಾಳಿ: 10 ಮಂದಿ ಮೃತ್ಯು; 30 ಮಂದಿಗೆ ಗಾಯ
ಕೀವ್, ಮೇ 27: ಉಕ್ರೇನ್ ನ ನೀಪ್ರೊ ನಗರದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿ ರಶ್ಯ ಶುಕ್ರವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದು 30 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಸೇನಾ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಶುಕ್ರವಾರ ಬೆಳಿಗ್ಗೆ ಕ್ಷಿಪಣಿ ದಾಳಿ ನಡೆದಿದ್ದು ದುರದೃಷ್ಟವಶಾತ್ 10 ಮಂದಿ ಸಾವನ್ನಪ್ಪಿದ್ದಾರೆ. 30ರಿಂದ 35 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಸೇನೆಯ ಪ್ರಾದೇಶಿಕ ಮುಖ್ಯಸ್ಥ ಗೆನಡಿ ಕೋರ್ಬನ್ ರನ್ನು ಉಲ್ಲೇಖಿಸಿ ಉಕ್ರೇನ್ ನ ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ಯುದ್ಧ ಆರಂಭವಾಗಿ 3 ತಿಂಗಳು ಕಳೆದರೂ ಇದುರೆಗೆ ಉಕ್ರೇನ್ನ ಮಧ್ಯಭಾಗದಲ್ಲಿರುವ ನೀಪ್ರೋ ನಗರ ರಶ್ಯದ ವಾಯುದಾಳಿಯ ವ್ಯಾಪ್ತಿಯಲ್ಲಿ ಇರಲಿಲ್ಲ. ಆದರೆ ಶುಕ್ರವಾರ ರಶ್ಯದ ಕ್ಷಿಪಣಿ ಈ ನಗರವನ್ನೂ ತಲುಪಿದೆ. ಯುದ್ಧದ ಕಾರಣ ಉಕ್ರೇನ್ನ ಇತರೆಡೆಯಿಂದ ಸ್ಥಳಾಂತರಗೊಂಡಿರುವವರಿಗೆ ನೀಪ್ರೊದಲ್ಲಿ ನೆಲೆ ಕಲ್ಪಿಸಲಾಗಿದೆ. ಕ್ಷಿಪಣಿ ದಾಳಿಯಲ್ಲಿ ಹಲವು ಕಟ್ಟಡಗಳಿಗೆ ತೀವ್ರ ಹಾನಿಯಾಗಿದ್ದು ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಮೃತರ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಗವರ್ನರ್ ವಲೆಂಟಿನ್ ರೆಝ್ನಿಚೆಂಕೊ ಹೇಳಿದ್ದಾರೆ.