ರಾಜಸ್ಥಾನ ತಂಡದ ವಿರುದ್ಧ ಕಳಪೆ ಪ್ರದರ್ಶನ: ಆರ್ಸಿಬಿಯ ಮುಹಮ್ಮದ್ ಸಿರಾಜ್ ಕುಟುಂಬಸ್ಥರಿಗೆ ಆನ್‌ಲೈನ್ ನಿಂದನೆ

ಬೆಂಗಳೂರು: ಎರಡನೇ ಕ್ವಾಲಿಫೈರ್ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಿದೆ. ರಾಜಸ್ತಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ್ದಾರೆ.
ಬಟ್ಲರ್ ಮತ್ತು ಜೈಸ್ವಾಲ್ ಇಬ್ಬರೂ ಚೆನ್ನಾಗಿ ಆಟವನ್ನು ಪ್ರಾರಂಭಿಸಿದ್ದು, ಇನ್ನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ 60 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 158 ಗುರಿಯನ್ನು ಮಾತ್ರ ಎದುರಾಳಗಳಿಗೆ ನೀಡಲು ಸಾಧ್ಯವಾದ ಆರ್‌ಸಿಬಿಗೆ ಇವರ ಆಟವು ಮಾರಕವಾಗಿ ಪರಿಣಮಿಸಿದೆ. ಅದಾಗ್ಯೂ, ಪಂದ್ಯ ಇನ್ನೂ ಮುಗಿಯಬೇಕಿರುವ ನಡುವೆಯೇ ಆರ್‌ಸಿಬಿ ಅಭಿಮಾನಿಗಳು ವೇಗಿ ಮಹಮ್ಮದ್ ಸಿರಾಜ್‌ರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ.
ಸಿರಾಜ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಅಸಭ್ಯ ಭಾಷೆಯಲ್ಲಿ ಕಾಮೆಂಟ್ ಮಾಡುವ ಮೂಲಕ ನಿಂದಿಸಿದ್ದಾರೆ. ಕೆಲವು ಅಭಿಮಾನಿಗಳು ಸಿರಾಜ್‌ನ ಮೃತ ತಂದೆಯನ್ನು ತಮ್ಮ ನಿಂದನೆಗೆ ಎಳೆದು ತಂದರೆ, ಇತರರು ಸಿರಾಜ್ ತಾಯಿ ಮತ್ತು ಇತರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ನಿಂದಿಸಿದ್ದಾರೆ. ಇನ್ನು ಕೆಲವು ನೆಟ್ಟಿಗರು ಸಿರಾಜ್ ಕ್ರಿಕೆಟ್‌ನಿಂದ ನಿವೃತ್ತರಾಗುವಂತೆ ಕರೆ ನೀಡಿದ್ದಾರೆ. ಹಲವು ಮಂದಿ ನಿಂದನೆಗೈದರೂ ಬಹುತೇಕರು ಅವರನ್ನು ಬೆಂಬಲಿಸಿದ್ದಾರೆ.