ಐಪಿಎಲ್: ಬಟ್ಲರ್ ಭರ್ಜರಿ ಬ್ಯಾಟಿಂಗ್, ರಾಜಸ್ಥಾನ ರಾಯಲ್ಸ್ ಫೈನಲ್‌ಗೆ
ಎರಡನೇ ಕ್ವಾಲಿಫೈಯರ್: ಆರ್‌ಸಿಬಿಗೆ 7 ವಿಕೆಟ್ ಸೋಲು

ಅಹಮದಾಬಾದ್, ಮೇ 27: ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್(ಔಟಾಗದೆ 106 ರನ್, 60 ಎಸೆತ, 10 ಬೌಂಡರಿ, 6 ಸಿಕ್ಸರ್)ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಸದೆಬಡಿಯಿತು. ಈ ಮೂಲಕ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್ ತಲುಪಿತು. ಮೇ 29ರಂದು ನಡೆಯುವ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಬಟ್ಲರ್ 59 ಎಸೆತಗಳಲ್ಲಿ ಪ್ರಸಕ್ತ ಟೂರ್ನಿಯಲ್ಲಿ 4ನೇ ಶತಕವನ್ನು ಸಿಡಿಸಿ ಮಿಂಚಿದರು. ಟೂರ್ನಿಯುದ್ದಕ್ಕೂ ರನ್ ಹೊಳೆ ಹರಿಸಿರುವ ಇಂಗ್ಲೆಂಡ್ ಬ್ಯಾಟರ್ ಬಟ್ಲರ್ ಈ ಋತುವಿನಲ್ಲಿ 800ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ರಾಜಸ್ಥಾನ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
5.1 ಓವರ್‌ಗಳಲ್ಲಿ 61 ರನ್ ಸೇರಿಸಿದ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ರಾಜಸ್ಥಾನಕ್ಕೆ ಬಿರುಸಿನ ಆರಂಭ ಒದಗಿಸಿಕೊಟ್ಟರು. ನಾಯಕ ಸಂಜು ಸ್ಯಾಮ್ಸನ್ 23 ರನ್, ಜೈಸ್ವಾಲ್ 21 ರನ್ ಗಳಿಸಿದರು. ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ ಪ್ರಸಿದ್ಧ ಕೃಷ್ಣ(3-22) ಹಾಗೂ ಒಬೆಡ್ ಮೆಕಾಯ್(3-23) ನೆರವಿನಿಂದ ರಾಜಸ್ಥಾನ ತಂಡ ಬೆಂಗಳೂರು ತಂಡವನ್ನು 157 ರನ್‌ಗೆ ನಿಯಂತ್ರಿಸಲು ಯಶಸ್ವಿಯಾಯಿತು.
ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕದಿಂದ ಮಿಂಚಿದ್ದ ಅಗ್ರ ಸರದಿಯ ಬ್ಯಾಟರ್ ರಜತ್ ಪಾಟಿದಾರ್ ಆಕರ್ಷಕ ಅರ್ಧಶತಕದೊಂದಿಗೆ (58 ರನ್, 42 ಎಸೆತ, 4 ಬೌಂಡರಿ, 3 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು. ಪಾಟಿದಾರ್ ಅರ್ಧಶತಕ ಪೂರೈಸಿದ ಬೆನ್ನಿಗೇ ವಿಕೆಟ್ ಒಪ್ಪಿಸಿದರು. ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ(3-22) ಹಾಗೂ ವಿಂಡೀಸ್ ಬೌಲರ್ ಒಬೆಡ್ ಮೆಕಾಯ್(3-23) ಆರ್‌ಸಿಬಿಯನ್ನು 160ರೊಳಗೆ ನಿಯಂತ್ರಿಸಲು ಯಶಸ್ವಿಯಾದರು.
ಆರ್‌ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಪಾಟಿದಾರ್ ಹೊರತುಪಡಿಸಿ ನಾಯಕ ಎಫ್‌ಡು ಪ್ಲೆಸಿಸ್(25 ರನ್, 27 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್(24 ರನ್, 13 ಎಸೆತ)ಹಾಗೂ ಶಹಬಾಝ್ ಅಹ್ಮದ್(ಔಟಾಗದೆ 12, 8 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.