ಹೈಕೋರ್ಟ್ ನ 6 ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸು

ಹೊಸದಿಲ್ಲಿ, ಮೇ 27: ಉಚ್ಚ ನ್ಯಾಯಾಲಯದ 6 ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸು ಮಾಡಿದೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆ, ವಾಪಸಾತಿ, ಬಡ್ತಿಯನ್ನು ನಿರ್ವಹಿಸುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎ.ಎಂ. ಕನ್ವಿಲ್ಕರ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ಮೂವರು ಸದಸ್ಯರ ಕೊಲೀಜಿಯಂ 6 ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು ಮಾಡಿದೆ.
ವರ್ಗಾವಣೆಗೊಂಡವರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಮೂರ್ತಿ ಪುರುಷೈಂದ್ರ ಕುಮಾರ್ ಗೌರವ್, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಿಂದ ಪಾಟ್ನಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಗೊಂಡ ನ್ಯಾಯಮೂರ್ತಿ ಎಹ್ಸಾನುದ್ದೀನ್ ಅಮಾನುಲ್ಲಾಹ್ ಅವರು ಕೂಡ ಸೇರಿದ್ದಾರೆ.
ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ಕೊಲೀಜಿಯಂನ ನಿರ್ಧಾರದ ಪ್ರಕಾರ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಅವರನ್ನು ಒಡಿಶಾ ಉಚ್ಚ ನ್ಯಾಯಾಲಯದಿಂದ ಕೋಲ್ಕತ್ತಾ ಉಚ್ಚ ನ್ಯಾಯಾಲಯಕ್ಕೆ, ನ್ಯಾಯಮೂರ್ತಿ ಸುಭಾಸಿಸ್ ತಾಲಪತ್ರ ಅವರನ್ನು ತ್ರಿಪುರಾ ಉಚ್ಚ ನ್ಯಾಯಾಲಯದಿಂದ ಒಡಿಶಾ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ನ್ಯಾಯಮೂರ್ತಿ ಲಾನುಸಂಗ್ಕುಮ್ ಜಮೀರ್ ಅವರನ್ನು ಮಣಿಪುರ ಉಚ್ಚ ನ್ಯಾಯಾಲಯದಿಂದ ಗುವಾಹತಿ ಉಚ್ಚ ನ್ಯಾಯಾಲಯಕ್ಕೆ, ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಅವರನ್ನು ಜಮ್ಮು ಹಾಗೂ ಕಾಶ್ಮೀರ ಹಾಗೂ ಲಡಾಕ್ ಉಚ್ಚ ನ್ಯಾಯಾಲಯದಿಂದ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ವಗಾಯಿಸಲಾಗಿದೆ.