ಐಷಾರಾಮಿ ನೌಕೆ ಮುಟ್ಟುಗೋಲು ಪ್ರಕರಣ: ಕಾನೂನು ಸಮರದಲ್ಲಿ ಅಮೆರಿಕಕ್ಕೆ ಗೆಲುವು
ವೆಲಿಂಗ್ಟನ್, ಮೇ 27: ಫಿಜಿಯಲ್ಲಿ ರಶ್ಯದ ಐಷಾರಾಮಿ ವಿಹಾರ ನೌಕೆಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಕ್ಕೆ ಸಂಬಂಧಿಸಿದ ಕಾನೂನು ಸಮರದಲ್ಲಿ ಅಮೆರಿಕ ಗೆದ್ದಿದೆ ಎಂದು ವರದಿಯಾಗಿದೆ.
ಉಕ್ರೇನ್ ವಿರುದ್ಧ ಆಕ್ರಮಣ ನಡೆಸಿದ್ದಕ್ಕೆ ಪ್ರತಿಯಾಗಿ ರಶ್ಯದ ಆಡಳಿತದ ಜತೆಗೆ ನಿಕಟವಾಗಿರುವ ರಶ್ಯದ ಹಲವು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರ ಪ್ರಕಾರ, ಫಿಜಿ ದೇಶದಲ್ಲಿ ಲಂಗರು ಹಾಕಿದ್ದ ರಶ್ಯದ ಮಾಜಿ ಸಂಸದ, ಉದ್ಯಮಿ ಸುಲೇಮಾನ್ ಕೆರಿಮೋವ್ ಒಡೆತನದ 325 ಮಿಲಿಯನ್ ಡಾಲರ್ ಮೌಲ್ಯದ ವಿಹಾರ ನೌಕೆಯನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿತ್ತು. ಆದರೆ ನೌಕೆಯ ಮಾಲಕ ತಾನು ಎಂದು ಹೇಳಿದ್ದ ಫೈಝಲ್ ಹನೀಫ್ ಎಂಬ ಉದ್ಯಮಿ, ಅಮೆರಿಕದ ಕ್ರಮವನ್ನು ಪ್ರಶ್ನಿಸಿ ಫಿಜಿಯ ಅಪೀಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಹನೀಫ್ ಅರ್ಜಿಯನ್ನು ತಳ್ಳಿಹಾಕಿದೆ. ಆದರೆ ಅರ್ಜಿದಾರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ, ಮುಂದಿನ 7 ದಿನದವರೆಗೆ ನೌಕೆಯನ್ನು ಮುಟ್ಟುಗೋಲು ಹಾಕಿಕೊಳ್ಳದಂತೆ ಅಮೆರಿಕಕ್ಕೆ ಸೂಚಿಸಿದೆ. ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿ ಹನೀಫ್ ಹೇಳಿದ್ದಾರೆ.