ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಹಸಿರು ಟವಲ್ ತೆಗೆಯಲಿ: ಬಡಗಲಪುರ ನಾಗೇಂದ್ರ

ಮೈಸೂರು: 'ರೈತ ಮುಖಂಡ ಎಂದು ಹೇಳಿಕೊಂಡು ಓಡಾಡುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ ವೇಳೆ ಕೋಟಿಗಟ್ಟಲೆ ಹಣ ಡೀಲ್ ಮಾಡಿಕೊಂಡಿದ್ದಾರೆ ಎಂಬ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು' ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಈ ಹಿಂದೆಯೂ ರೈತ ಹೋರಾಟದ ಹೆಸರಿನಲ್ಲಿ ಇಬ್ಬಂದಿತನ ತೋರಿದ್ದಾರೆ. ಹಾಗಾಗೆ ಅವರನ್ನು ನಾವು ದೂರ ಇಟ್ಟಿದ್ದೆವು. ಆದರೆ ಅವರು ರೈತರ ಹೆಸರೇಳಿಕೊಂಡು ಇಂತಹ ವ್ಯವಹಾರ ನಡೆಸುತ್ತಿರುವುದು ರೈತರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎಂಬ ಆರೋಪ ಒತ್ತಿರುವ ಅವರ ವಿರುದ್ಧ ರಾಜ್ಯ ಸರ್ಕಾರ ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಿ ಸತ್ಯಾ ಸತ್ಯತೆ ಬಯಲಿಗೆಳೆಯಬೇಕು, ಅಲ್ಲಿವರೆಗೆ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಹಸಿರು ಟವಲ್ ಅನ್ನು ತೆಗಿಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರ ಖಂಡಿಸಿ ಮತ್ತು ಇವರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಒತ್ತಾಯಿಸಿ ಮೇ.31 ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಸರಗೂರು ನಟರಾಜು, ಸಿಂಗೇಗೌಡ ಉಪಸ್ಥಿತರಿದ್ದರು.