ಪೊಲೀಸ್ ಠಾಣಾ ಮಟ್ಟದ ಯುವ ಸಮಿತಿಗೆ 10-15 ದಲಿತ ಯುವಕರ ಸೇರ್ಪಡೆಗೆ ಆದ್ಯತೆ: ಡಿಸಿಪಿ ಹರಿರಾಂ ಶಂಕರ್
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ದಲಿತರ ಕುಂದುಕೊರತೆಗಳ ಸಭೆ

ಮಂಗಳೂರು, ಮೇ 28: ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯರ ಸೂಚನೆ ಹಾಗೂ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಪ್ರತಿ ಠಾಣಾ ಮಟ್ಟದಲ್ಲಿ ಯುವ ಸಮಿತಿ ರಚನೆಗೆ ನಿರ್ಧರಿಸಿರುವಂತೆ ಸಮಿತಿಯಲ್ಲಿ 10ರಿಂದ 15 ಮಂದಿ ದಲಿತ ಸಮುದಾಯದ ಯುವಕರಿರುವ ನಿಟ್ಟಿನಲ್ಲಿ ಸಮುದಾಯದ ನಾಯಕರು ಗಮನ ಹರಿಸಬೇಕು ಎಂದು ಡಿಸಿಪಿ ಹರಿರಾಂ ಶಂಕರ್ ಸಲಹೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿಂದು ದಲಿತರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸೂಕ್ಷ್ಮ ಪ್ರದೇಶವಾಗಿರುವ ದ.ಕ. ಜಿಲ್ಲೆಯಲ್ಲಿ ಕೋಮು ಸಂಘರ್ಷಗಳ ಸಂದರ್ಭ ಶಾಂತಿ ಸಭೆಗಳನ್ನು ನಡೆಸಲಾಗುತ್ತದೆ. ಆದರೆ ಕೋಮು ಸಂಘರ್ಷಗಳಲ್ಲಿ ಹೆಚ್ಚಾಗಿ ಭಾಗಿಯಾಗುವ ಯುವಕರು ಶಾಂತಿ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಅವರನ್ನು ಸೇರಿಸಿಕೊಂಡು ಸಭೆ ನಡೆಸಿದರೆ ಸಮಾಜದಲ್ಲಿ ಸಾಕಷ್ಟು ಸಂಘರ್ಷ, ಅಪರಾಧ ಕೃತ್ಯಗಳ್ನು ತಡೆಯಲು ಸಾಧ್ಯ ಎಂಬ ಹಿನ್ನೆಲೆಯಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಮಂಗಳೂರು ನಗರದಲ್ಲಿ ಯುವ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. 40 ವರ್ಷದೊಳಗಿನ ಸುಮಾರು 40ರಿಂದ 50 ಮಂದಿಯ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಪಕ್ಷ, ಸಂಘಟನೆ ಹಾಗೂ ಇತರ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಯುವ ಸಮಿತಿಯಲ್ಲಿ ದಲಿತ ಸಮುದಾಯದ ಯುವಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿರಬೇಕೆಂಬುದು ತನ್ನ ಆಶಯ ಎಂದು ಅವರು ಹೇಳಿದರು.
ಮುಂದಿನ ಎರಡು ವಾರಗಳಲ್ಲಿ ಬೀಟ್ ವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ಮರು ಸಂಘಟಿಸಲು ಕ್ರಮ ವಹಿಸಲಾಗುವುದು. ಬೀಟ್ ಸಿಬ್ಬಂದಿ ಪ್ರತಿ ಮನೆಗೂ ಭೇಟಿ ನೀಡಿ ಒಂಟಿ ಮನೆ ಸೇರಿದಂತೆ ಮನೆಗಳವರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ಈ ಸಂದರ್ಭ ತಿಳಿಸಿದರು.
ಕಾನೂನುಬದ್ಧ ಪ್ರತಿಭಟನೆಗೆ ಸಹಕಾರ
ಕೋವಿಡ್ ನಂತರ ನಗರದಲ್ಲಿ ದಲಿತ ಸಮುದಾಯಗಳು ಹಲವು ರೀತಿಯ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದು, ಪೊಲೀಸರು ಸಹಕಾರ ನೀಡಿದ್ದು, ಮುಂದೆಯೂ ಕಾನೂನುಬದ್ಧ, ನ್ಯಾಯಯುತ ವಿಷಯಗಳ ಪ್ರತಿಭಟನೆಗೆ ಸಹಕಾರ ನೀಡಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.
ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಆರೋಪ
ದಲಿತ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನಗರದ ಉರ್ವಾ ಬಳಿ ಇರುವ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದು, ಜಿಲ್ಲೆಯನ್ನು ಮಳೆಗಾಲದಲ್ಲಿ ಕಾಡುವ ಡೆಂಗ್, ಮಲೇರಿಯಾ ಭೀತಿಯೂ ಈ ಹಾಸ್ಟೆಲ್‌ನಲ್ಲಿ ಕಾಡುತ್ತಿದೆ ಎಂದು ದಲಿತ ಮುಖಂಡ ಎಸ್.ಪಿ. ಆನಂದ ಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹರಿರಾಂ ಶಂಕರ್, ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸ್ಥಳೀಯ ಠಾಣಾ ಪೊಲೀಸರಿಗೆ ಸೂಚಿಸಿದರು.
ಶಾಲಾ ಕಾಲೇಜು ಆರಂಭವಾಗಿದ್ದು, ಖಾಸಗಿ ಶಾಲಾ ಕಾಲೇಜುಗಳಲ್ಲಿ ಆರಂಭದಲ್ಲಿ ಶಾಲಾ ಶುಲ್ಕ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ. ಹಿಂದೆ ಕಂತುಗಳಲ್ಲಿ ಪಾವತಿಗೆ ಅವಕಾಶವಿದ್ದರೂ ಅದನ್ನು ನಿರಾಕರಿಸಲಾಗುತ್ತಿದೆ ಎಂದು ದಲಿತ ನಾಯಕರು ಸಭೆಯ ಗಮನಕ್ಕೆ ತಂದಾಗ ಅಂತಹ ನಿರ್ದಿಷ್ಟ ಪ್ರಕರಣಗಳಿದ್ದಲ್ಲಿ ತಿಳಿಸಿದರೆ ತನ್ನ ಮಟ್ಟದಲ್ಲಿ ಸಾಧ್ಯವಾಗುವ ಪ್ರಯತ್ನದ ಜತೆಗೆ ಯಾರ ಶಿಕ್ಷಣಕ್ಕೂ ತೊಂದರೆ ಆಗದಂತೆ ಕ್ರಮ ವಹಿಸುವುದಾಗಿ ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.
ತಮ್ಮ ಬ್ಯಾಂಕ್ ಖಾತೆಯಿಂದ ಎಪ್ರಿಲ್‌ನಲ್ಲಿ ಮೂರು ಬಾರಿ ಹಾಗೂ ಮೇ 11ರಂದು ಮತ್ತೆ ತಲಾ ತಲಾ 5,280 ರೂ. ಕಡಿತವಾಗಿದೆ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದ್ದು, ಠಾಣೆಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ ಎಂದು ಸಭೆಯಲ್ಲಿ ವ್ಯಕ್ತಿಯೊಬ್ಬರು ದೂರಿದಾಗ, ಸೂಕ್ತ ಕ್ರಮದ ಭರವಸೆಯನ್ನು ಡಿಸಿಪಿ ನೀಡಿದರು.
ಸಭೆಯಲ್ಲಿ ನಗರದಲ್ಲಿ ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಸಮಸಯೆ, ಕುದ್ಕೋರಿ ಗುಡ್ಡದ ಬಳಿ ವಾಹನದಟ್ಟಣೆ ನಿಯಂತ್ರಣ, ದಲಿತ ಕಾಲನಿಗಳಲ್ಲಿ ಯುವಕರ ಡ್ರಗ್ಸ್ ಸೇವನೆಗೆ ಕ್ರಮ ಸೇರಿದಂತೆ ಹಲವು ಮನವಿಗಳನ್ನು ದಲಿತ ನಾಯಕರು ಸಲ್ಲಿಸಿದರು.
ದಲಿತ ನಾಯಕರಾದ ಜಗದೀಶ್ ಪಾಂಡೇಶ್ವರ, ಪ್ರೇಮನಾಥ್ ಬಳ್ಳಾಲ್‌ಬಾಗ್, ಅಚ್ಯುತ, ಅನಿಲ್ ಕುಮಾರ್ ಮೊದಲಾದವರು ಮಾತನಾಡಿದರು.
ಅಂಬೇಡ್ಕರ್ ವೃತ್ತಕ್ಕಿನ್ನೂ ಯಾಕೆ ಕಾಲ ಕೂಡಿ ಬಂದಿಲ್ಲ?
ಮಂಗಳೂರು ನಗರ ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿಯಾಗುತ್ತಿದ್ದು, ಸಾಕಷ್ಟು ಹೊಸ ವೃತ್ತಗಳು ತಲೆಯೆತ್ತಿವೆ. ಆದರೆ ಕಳೆದ ಹಲವು ವರ್ಷಗಳಿಂದ ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ವೃತ್ತ ರಚನೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ. ವೃತ್ತ ನಿರ್ಮಾಣಕ್ಕಾಗಿ 98 ಲಕ್ಷ ರೂ. ಬಿಡುಗಡೆ ಆಗಿದೆ ಎಂದು ಹೇಳಲಾಗುತ್ತಿದೆಯಾದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂಬ ಆಕ್ಷೇಪ ಸಭೆಯಲ್ಲಿ ದಲಿತ ನಾಯಕರಿಂದ ವ್ಯಕ್ತವಾಯಿತು.
ಇಲಾಖೆಗೆ ಸೇರಲು ಬಯಸುವ ದಲಿತರಿಗೆ ಮಾರ್ಗದರ್ಶನಕ್ಕೆ ಆಹ್ವಾನ
ದ.ಕ. ಜಿಲ್ಲೆಯಿಂದ ಪೊಲೀಸ್ ಇಲಾಖೆಗೆ ಸೇರ್ಪಡೆಗೆ ಆಸಕ್ತಿ ಇಲ್ಲ ಎಂಬ ಮಾತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇತ್ತೀಚೆಗೆ ಜಿಲ್ಲೆಯ ಯುವ ಸಮುದಾಯಕ್ಕೆ ಪೊಲೀಸ್ ತರಬೇತಿ ಕಾರ್ಯಾಗಾರ ನಡೆಸಿದಾಗ ಉತ್ತಮ ಪ್ರತಿಕ್ರಿಯೆ ದೊರಕಿದ್ದಲ್ಲದೆ, ಜಿಲ್ಲೆಯ ಸಾಕಷ್ಟು ಮಂದಿ ಇಲಾಖೆಗೆ ಸೇರ್ಪಡೆಗೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ದಲಿತ ಸಮುದಾಯದವರೂ ಇರುವುದು ಸಂತಸದ ವಿಚಾರವಾಗಿದ್ದು, ಮುಂದೆಯೂ ದಲಿತ ಸಮುದಾಯದಿಂದ ಇಲಾಖೆಗೆ ಸೇರಲು ಬಯಸುವುದಾದರೆ ಅವರಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಲಾಗುವುದು. ಆಸಕ್ತರಿಗೆ ಮುಕ್ತ ಆಹ್ವಾನ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.