Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೂರು ತಲೆಮಾರುಗಳ ದಲಿತ ಕಥನ ಕಾಣಿಸುವ...

ಮೂರು ತಲೆಮಾರುಗಳ ದಲಿತ ಕಥನ ಕಾಣಿಸುವ ‘ಬಯಲೆಂಬೊ ಬಯಲು’

ಡಾ. ಎಂ. ವೆಂಕಟಸ್ವಾಮಿಡಾ. ಎಂ. ವೆಂಕಟಸ್ವಾಮಿ28 May 2022 3:18 PM IST
share
ಮೂರು ತಲೆಮಾರುಗಳ ದಲಿತ ಕಥನ ಕಾಣಿಸುವ ‘ಬಯಲೆಂಬೊ ಬಯಲು’

ಪ್ರೊ. ಎಚ್.ಟಿ.ಪೋತೆ ಅವರು ತಮ್ಮ, ‘ಬಯಲೆಂಬೊ ಬಯಲು’ ಕೃತಿಗೆ ‘ಬಯೋಪಿಕ್ ಕಾದಂಬರಿ’ ಎಂಬ ಉಪಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಈ ಹೆಸರನ್ನು ವಚನ ಸಾಹಿತ್ಯದ ಹಿನ್ನೆಲೆಯಿಂದ ಕೊಡಲಾಗಿದೆ. ಈ ಬಯೋಪಿಕ್ ಕಾದಂಬರಿ, ಮೂರು ತಲೆಮಾರುಗಳ ದಲಿತ ಕತೆಯೊಂದನ್ನು ಹೇಳುತ್ತಾ ತಣ್ಣಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕಾದಂಬರಿಯಲ್ಲಿ ಬರುವ ರಾಮಪ್ಪ, ತಿಪ್ಪಣ್ಣ ಮತ್ತು ಹನುಮ ಮೂರು ತಲೆಮಾರುಗಳ ಒಂದು ದಲಿತ ಕೂಡು ಕುಟುಂಬವಾಗಿದ್ದು, ರಾಮಣ್ಣ ಸ್ವಾತಂತ್ರ್ಯಪೂರ್ವದ ವ್ಯಕ್ತಿಯಾದರೆ, ತಿಪ್ಪಣ್ಣ ಸ್ವಾತಂತ್ರೋತ್ತರ -ಸ್ವಾತಂತ್ರ್ಯಾನಂತರದ ವ್ಯಕ್ತಿ; ಹನುಮ ಸ್ವಾತಂತ್ರೋತ್ತರದಲ್ಲಿ ಶಿಕ್ಷಣ ಪಡೆದ ಮೊದಲ ತಲೆಮಾರಿನ ವ್ಯಕ್ತಿ. ಮೂರೂ ಪಾತ್ರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸುತ್ತಲಿನ ಸಮಾಜಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಾ ಹೋಗುತ್ತವೆ. ಈ ಕುಟುಂಬದ ಒಗ್ಗಟ್ಟಿನ ಹೋರಾಟ, ದುಡಿಮೆ-ಶ್ರಮ ಎಲ್ಲವನ್ನೂ ಗಮನಿಸಿದಾಗ ದಲಿತರಿಗೆ ಒಂದಷ್ಟು ನೆಲ ಮತ್ತು ಸಾಮಾಜಿಕ ನ್ಯಾಯ ದೊರಕಿದರೆ ಸಾಕು ಏನೂ ಬೇಕಾದರೂ ಸಾಧಿಸುತ್ತಾರೆ ಎನ್ನುವುದು ಇಲ್ಲಿ ಎದ್ದು ಕಾಣಿಸುತ್ತದೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಇದನ್ನೇ ಹೇಳಿದ್ದಾರೆ. ಆದರೆ ಶ್ರೇಣೀಕೃತ ಹಿಂದೂ ಸಮಾಜ ಅವೆಲ್ಲವನ್ನೂ ನುಚ್ಚುನೂರು ಮಾಡಿಬಿಟ್ಟಿದೆ.

 ಅಸ್ಪಶ್ಯತೆಯೆಂಬ ಕಳಂಕವಂತೂ ಇಡೀ ಜಗತ್ತಿನಲ್ಲಿ ಮನುಷ್ಯರ ಮಧ್ಯೆ ಹೇಸಿಗೆ ಹುಟ್ಟಿಸುವ ಕಳಂಕವಾಗಿದೆ. ಇದು ಹೋಗದಿದ್ದಲ್ಲಿ ಹಿಂದೂ ಸಮಾಜಕ್ಕೆ ಜಗತ್ತಿನಲ್ಲಿ ಯಾವ ಗೌರವವೂ ಇರುವುದಿಲ್ಲ ಎಂಬುದಾಗಿ ಮಹಾತ್ಮಾ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆಧುನಿಕತೆ-ಅಭಿವೃದ್ಧಿ ಬೆಳೆದಂತೆ ಮೂಢನಂಬಿಕೆಗಳು, ಧರ್ಮಾಂಧತೆ ನಾಶವಾಗುತ್ತವೆ ಎಂಬುದಾಗಿ ಕೆಲವು ಮಹನೀಯರು ಬಹಳ ಹಿಂದೆಯೇ ಹೇಳಿದ್ದರು. ಆದರೆ ಇಂದಿನ ಪರಿಸ್ಥಿತಿ ಬೇರೆಯೇ ಆಗಿದೆ. ಮರಾಠಿ ಭಾಷೆಯಲ್ಲಿ ಮೊದಲು ಪ್ರಾರಂಭಗೊಂಡ ದಲಿತ ಆತ್ಮಕತೆಗಳು ತೀರಾ ಕೆಳಮಟ್ಟದ ಬದುಕನ್ನು ಮತ್ತು ತಮ್ಮ ಸಮುದಾಯಗಳನ್ನು ತಾವೇ ಅವಹೇಳನಕಾರಿಯಾಗಿ ಚಿತ್ರಿಸಿಕೊಂಡಿದ್ದನ್ನು ನೋಡಿದ್ದೇವೆ. ಕನ್ನಡದಲ್ಲಿಯೂ ಕೆಲವು ಲೇಖಕರು ಅದೇ ರೀತಿ ಬರೆದುಕೊಂಡರು. ಆದರೆ ಅದನ್ನೆಲ್ಲ ದೂರ ಇಟ್ಟು ನಡೆದಿರುವುದು ಈ ಕಾದಂಬರಿಯ ವಿಶೇಷ. ಅಂದರೆ ಪೋತೆ ಅವರ ಬಯೋಪಿಕ್ ಅದನ್ನೆಲ್ಲ ಮೀರಿ ಆತ್ಮವಿಶ್ವಾಸ-ಅಭಿಮಾನವನ್ನು ಹುಟ್ಟಿಸುವಂತೆ ಚಿತ್ರಣಗೊಂಡಿದೆ. 

ಕಾದಂಬರಿಯಲ್ಲಿ ಬರುವ ಕೆಲವು ಸೂಕ್ಷ್ಮತೆಗಳು ಹೀಗಿವೆ: ‘‘ಹೋಗೋ ಮಾರಾಯ ಅಂವ (ಅಧಿಕಾರಿ) ನಿಮ್ಮಾವನ ಅದಾನ’’ ಎಂದಾಗ, ತಿಪ್ಪಣ್ಣನ ಜಾತಿಗೆ ಸೇರಿದ ಅಧಿಕಾರಿಯನ್ನು ಏಕವಚನದಲ್ಲಿ ಗೌಡ ಕರೆದಿದ್ದಕ್ಕೆ ತಿಪ್ಪಣ್ಣ ತೀರಾ ಬೇಸರಗೊಳ್ಳುತ್ತಾರೆ. ಇದು ಅಂಬೇಡ್ಕರ್ ಅವರು ತಮ್ಮ ಸಮುದಾಯಗಳ ಬಗ್ಗೆ ಹೊಂದಿದ್ದ ಭ್ರಾತೃತ್ವದ ಪ್ರೇಮ. ಇದು ಎಲ್ಲಾ ದಲಿತರಲ್ಲೂ ಇಂದಿಗೂ ಕಂಡುಬರುವ ಸಾಮಾನ್ಯ ನಡವಳಿಕೆ. ಅದೇ ರೀತಿ ದಲಿತರು ಇಂದಿಗೂ ಸವರ್ಣೀಯರ ಜೊತೆಗೆ ಗೌರವವಾಗಿಯೇ ನಡೆದುಕೊಳ್ಳುತ್ತಾರೆ ಎನ್ನುವುದು ಸುಳ್ಳಲ್ಲ. ಇನ್ನೊಂದು ಕಡೆ, ತಿಪ್ಪಣ್ಣ ‘‘ಏನು ಮಾಡದಪಾ ಇಡೀ ಸಮಾಜ ಜಾತಿ ಹೆಸರಿನ ಮ್ಯಾಲ ನಮಗ ದಳಿ ಹಾಕದ್ಹಂಗ ಮಾಡ್ಯಾರ. ನಾವೆಲ್ಲ ಕಾಲು ಬಿಚ್ಚಿ ಕೈ ಬಿಚ್ಚಿ ಓಡಾಡಬಾರದು. ಮನಸ್ಸ ಬಿಚ್ಚಿ ಮಾತಾಡಬಾರದು. ಬಾವ್ಯಾಗ ಇಳಿದ ಕೊಡ ತೆಗೆದಿದ್ದಕ್ಕ, ಒಳ್ಳೆ ಬೆಳಿ ಬೆಳದಿದ್ದಕ್ಕ ಅವರಿಗ ಸಹಿಸಾಕ ಆಗಲಿಲ್ಲ. ನಮ್ಮ ಮನ್ಯಾಗ ಚೆಲುವ ಹೆಣ್ಮಕ್ಕಳು ಇರಬಾರದು, ಭಾರೀ ಹೋರಿ ಇರಬಾರದು, ಹಾಲಿಂಡಾ ಎಮ್ಮಿ ಇರಬಾರದು, ತೆಗ್ಗಿನ ಹೊಲ ಇರಬಾರದು. ಅಟ್ಟೆಯಾಕ ನಮ್ಮ ಮಕ್ಕಳು ಬೆಳ್ಳಗ ಹುಳ್ಳಗ ಇದ್ದರ ಅವರ ಕಣ್ಣ ಕುಕ್ಕತಾವ. ಇದಕ್ಕೆಲ್ಲ ವ್ಯವಸ್ಥೆ ಅನ್ನೋ ದಳ ಹಾಕ್ಯಾರಪ್ಪಏನು ಮಾಡಾದು...’’ ಹೀಗೆ ಅನೇಕ ವಿಷಯಗಳು ಕಾದಂಬರಿಯಲ್ಲಿ ಬರುತ್ತವೆ.

ಕಾದಂಬರಿ ಕಲಬುರಗಿ ಭಾಷೆಯಲ್ಲಿ ಇರುವುದು ಇನ್ನೊಂದು ಪ್ಲಸ್ ಪಾಯಿಂಟಾಗಿದೆ. ದಕ್ಷಿಣ ಕರ್ನಾಟಕದ ನನಗೆ ಇವರ ಭಾಷೆ ನೋಡಿ ಅಸೂಯೆ ಅಗದೇ ಇಲ್ಲ. ಈ ಕಾದಂಬರಿಯ ವಸ್ತು ತಳಸಮುದಾಯಗಳ ಒಂದು ಎಳೆ ಮಾತ್ರ ಎನ್ನಬಹುದು. ಕಾದಂಬರಿಯಲ್ಲಿ ಹಲವು ಪಾತ್ರಗಳು ಬರುತ್ತವೆ. ಆದರೆ ಓದುಗರ ಮುಂದೆ ಗಟ್ಟಿಯಾಗಿ ಕಾಣಿಸಿಕೊಳ್ಳುವುದು ಕೆಲವೇ ಪಾತ್ರಗಳು ಮಾತ್ರ. ಮನೆ ಹಿರಿಯನ ಮಾತಿನ ಮೇಲೆ ಎಲ್ಲರೂ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವ ಸಂದೇಶ ಇಲ್ಲಿ ಎದ್ದು ಕಾಣಿಸುತ್ತದೆ. ಆದರೆ ಹೊಸ ತಲೆಮಾರುಗಳು ಹುಟ್ಟಿದ್ದೇ ಒಂದು ಮನೆ ಎರಡು, ನಾಲ್ಕು ಮನೆಗಳಾಗುತ್ತವೆ, ಅದು ಅನಿವಾರ್ಯ. ಮುಂದಿನ ಪೀಳಿಗೆಗಳು ದಲಿತ ಪ್ರಜ್ಞೆಯೊಂದಿಗೆ, ಶಿಕ್ಷಣ ಪಡೆಯುವುದರ ಮೂಲಕ ಹಸಿವು-ಬಡತನ, ದಾರಿದ್ರ್ಯ ತನಗೆ ತಾನೇ ದೂರವಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಆದರೆ ಕಳೆದ ಎರಡು ವರ್ಷಗಳಲ್ಲಿ ನಡೆದ ಕೊರೋನ ದಾಳಿ, ಹಣದುಬ್ಬರ, ಕೇಸರಿ ಸಂಘಟನೆಗಳ ಹಠಮಾರಿತನ, ನೀಚ ರಾಜಕಾರಣ, ಸವರ್ಣೀಯ ಜಾತಿಗಳ ದಬ್ಬಾಳಿಕೆಯಿಂದ ಲಕ್ಷಾಂತರ ಬಡ ಸಮುದಾಯಗಳು ಬಡತನ ರೇಖೆಗಿಂತ ಕೆಳಕ್ಕೆ ತಳ್ಳಲ್ಪಟ್ಟಿವೆ. ಅಂಬೇಡ್ಕರ್ ದಕ್ಕಿಸಿಕೊಟ್ಟ ಮೀಸಲಾತಿಯಿಂದ ದಲಿತರ ಒಂದು ಸಣ್ಣ ಸಂಖ್ಯೆ ದೇಶದಾದ್ಯಂತ ಈ ದಿನ ಮುಖ್ಯವಾಹಿನಿಗೆ ಬಂದಿದ್ದರೂ ಅದು ಸಾಮಾಜಿಕ ಹೋರಾಟದ ಆರಂಭದಲ್ಲಿಯೇ ಇದೆ ಎನ್ನಬಹುದು. ಅಂಬೇಡ್ಕರ್ ಎಳೆದುಕೊಂಡು ಬಂದ ಸಾಮಾಜಿಕ ನ್ಯಾಯದ ರಥ ಈಗ ಡೋಲಾಯಮಾನ ಪರಿಸ್ಥಿತಿಯಲ್ಲಿ ನಿಂತುಕೊಂಡಿದೆ! ಸಾಮಾಜಿಕ ಎಡರುತೊಡರುಗಳ ನಡುವೆ ಸಾಗಿಬಂದಿರುವ ದಲಿತ-ಅಸ್ಪಶ್ಯರ ಬದುಕಿನ ಹೋರಾಟಗಳು ಈಗ ಹಿಂದೆಂದಿಗಿಂತಲೂ ಅಪಾಯದ ಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ದಲಿತ ಸಮುದಾಯಗಳ ರಾಜಕಾರಣಿಗಳು ಮತ್ತು ದಲಿತ ಅಧಿಕಾರಿಗಳು ಈಗ ಸಾಮಾನ್ಯ ದಲಿತ ಸಮುದಾಯಗಳ ವಿರೋಧಿಗಳಾಗಿ ಕೆಲಸ ಮಾಡುತ್ತಿರುವುದು ಶೋಚನೀಯ ಸ್ಥಿತಿ ಎನ್ನದೇ ಬೇರೆ ದಾರಿ ಇಲ್ಲ. ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಈಗ ಎಲ್ಲಿಲ್ಲದ ಶಕ್ತಿಬಂದಿದೆ. ಇಷ್ಟಾದರೂ ದಲಿತ ಸಮುದಾಯಗಳು ಒಂದಷ್ಟು ಅಭಿವೃದ್ಧಿಗೊಂಡಿವೆ ಎಂದರೆ ಅದು ಅಂಬೇಡ್ಕರ್ ಅವರ ತ್ಯಾಗ ಬಲಿದಾನ ಮತ್ತು ಸಂವಿಧಾನದ ಶಕ್ತಿಯಿಂದ.

ಇವೆಲ್ಲವನ್ನು ಕಾದಂಬರಿಯ ಮೂಲಕವೇ ಕಟ್ಟಿಕೊಟ್ಟಿರುವ ಪೋತೆ ಅವರ ಬಯೋಪಿಕ್ ತಣ್ಣಗೆ ಸಾಗುತ್ತಾ ಯಾವುದೇ ಅಬ್ಬರ, ಉತ್ಪ್ರೇಕ್ಷೆ, ಸ್ಲೋಗನ್‌ಗಳಿಲ್ಲದೆ ಕೊನೆಗೊಳ್ಳುತ್ತದೆ. ಪೋತೆಯವರ ಅರ್ಧ ಆತ್ಮಕತೆ ಇಲ್ಲಿ ಚಿತ್ರಣಗೊಂಡಿದ್ದು ಉಳಿದ ಕಥೆ ಏನೆಲ್ಲ ಹೊತ್ತು ತರುತ್ತದೆ ಎನ್ನುವ ಕುತೂಹಲವನ್ನು ಸೃಷ್ಟಿಸಿದೆ. ಆದರೆ ಎಲ್ಲವೂ ಒಂದು ಹಿಡಿಯಾಗಿ ಒಂದೇ ಸಲ ಬಂದಿದ್ದರೆ ಚೆನ್ನಾಗಿತ್ತು ಎನಿಸದೇ ಇರುವುದಿಲ್ಲ. ಪ್ರೊ. ಎಚ್.ಟಿ.ಪೋತೆ ಇತ್ತೀಚಿನ ದಿನಗಳಲ್ಲಿ ದಲಿತ ಸಾಹಿತ್ಯದಲ್ಲಿ ದೊಡ್ಡ ಹೆಸರು. ವಿಚಾರ, ವಿಮರ್ಶೆ, ಸೃಜನ, ಅನುವಾದ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಕೃತಿಗಳು; ಶರಣ ಸಾಹಿತ್ಯ, ವಿಮರ್ಶಾ ಸಂಪುಟಗಳು, ದಲಿತ ಸಾಹಿತ್ಯ ಸಂಪುಟಗಳು, ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರರ ಮಾಲೆ, ದಲಿತ ಸಾಹಿತ್ಯ ಸಂಪುಟಗಳ ಪ್ರಧಾನ ಸಂಪಾದಕರಾಗಿ 36 ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಬಂದಿದ್ದು ಕೆಲವು ಕೃತಿಗಳು ಇತರ ಭಾಷೆಗಳಿಗೆ ಭಾಷಾಂತರಗೊಂಡಿವೆ. ಅವುಗಳಲ್ಲಿ ‘ಭಂಗ’ ಮತ್ತು ‘ಚಮ್ಮಾವುಗೆ’ ಮುಖ್ಯವಾದವು. ಇವುಗಳ ಜೊತೆಗೆ ಇತ್ತೀಚಿನ ‘ಮಹಾಬಿಂದು’ ಕಾದಂಬರಿ ಕೂಡ ಸೇರಿಕೊಂಡಿದೆ. ಪೋತೆಯವರು, ಸಂಪಾದಕತ್ವದ ಮಾಲೆಗಳನ್ನು ಬಿಟ್ಟು ತಮ್ಮದೇ ಸೃಜನಶೀಲ ಸಾಹಿತ್ಯದಲ್ಲಿ ತೊಡಗಿಕೊಂಡರೆ ದಲಿತಲೋಕದ ಮಹತ್ವದ ಕೃತಿಗಳು ಕನ್ನಡ ಸಾಹಿತ್ಯಕ್ಕೆ ದಕ್ಕಬಹುದು ಎನ್ನುವುದು ನನ್ನ ಅಭಿಲಾಶೆ.

share
ಡಾ. ಎಂ. ವೆಂಕಟಸ್ವಾಮಿ
ಡಾ. ಎಂ. ವೆಂಕಟಸ್ವಾಮಿ
Next Story
X