ದೇರಳಕಟ್ಟೆ: ಕಣಚೂರು ಕಾಲೇಜು ಪದವಿ ದಿನಾಚರಣೆ
ಕಠಿಣ ಪರಿಶ್ರಮ, ಮಾನವೀಯ ಮೌಲ್ಯಗಳು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ: ಡಾ.ವೀರೇಂದ್ರ ಹೆಗ್ಗಡೆ

ಕೊಣಾಜೆ: ಕೇವಲ ಹಣ ಗಳಿಕೆಯ ಉದ್ದೇಶದಿಂದ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದಿಲ್ಲ. ಉತ್ತಮ ಕೌಶಲ್ಯ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳಿಂದ ಉತ್ತಮ ಯಶಸ್ಸು ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಪದ್ಮಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರ ದೇರಳಕಟ್ಟೆಯ ಕಣಚೂರು ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಹಾಗೂ ಆರೋಗ್ಯ ವಿಜ್ಞಾನ ಘಟಕದ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು.ಇಂದು ವೈದ್ಯಕೀಯ ರಂಗದಲ್ಲಿ ಆಧುನಿಕ ತಂತ್ರಜ್ಞಾನಗಳ ವ್ಯವಸ್ಥೆಯ ಮೂಲಕ ಮುನ್ನಡೆಯಬೇಕಿದೆ.. ನಮ್ಮ ವೃತ್ತಿ ಜೀವನದಲ್ಲಿ ತಾಳ್ಮೆ, ಸಂಯಮ ಅತ್ಯಂತ ಅಗತ್ಯವಾಗಿದೆ ಎಂದರು.
ತೃಪ್ತಿ ಮತ್ತು ಯಶಸ್ಸು ಜೀವನದ ಪ್ರಮುಖ ಸಂಗತಿ.ಯಶಸ್ಸು ಗಳಿಸಿದ ವ್ಯಕ್ತಿಯ ಬಗ್ಗೆ ಅಸೂಯೆ ಪಡದೆ ಅವರ ಸಾಧನೆಯ ಹಿಂದಿನ ಪರಿಶ್ರಮವನ್ನು ಅರಿತು ಬೆಳೆಯಬೇಕು.
ಧನಾತ್ಮಕ ಚಿಂತನೆಯೊಂದಿಗೆ ನಾವು ಬೆಳೆದರೆ ಯಶಸ್ಸು ಸಾಧ್ಯ ಎಂದು ಹೇಳಿದರು.ಕಣಚೂರು ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕರ್ನಾಟಕ ರಾಜೀವ್ ಗಾಂಧೀ ಹೆಲ್ತ್ ಸೈಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್ . ಶ್ರೀಪ್ರಕಾಶ್ ಅವರು ಮಾತನಾಡಿ, ನಾವು ಕಲಿತ ಶಿಕ್ಷಣದೊಂದಿಗೆ ಸಾಮಾಜಿಕ ಬದ್ಧತೆಯೂ ಇರಬೇಕಿದೆ.ಅಧ್ಯಯನಕ್ಕೆ ಕೊನೆ ಎಂಬುದಿಲ್ಲ.ಅದು ನಿರಂತರ ಪ್ರಕ್ರಿಯೆಯಾಗಿದ್ದು, ಯಾವುದೇ ಹುದ್ದೆಯಲ್ಲಿ ಮುಂದುವರಿದರೂ ಸದಾ ಅಧ್ಯಯನ ನಿರತರಾಗುವುದರೊಂದಿಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡೋಣ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಹಾಜಿ ಯು.ಕೆ.ಮೋನು ಅವರು ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 112 ಪದವೀಧರಿಗೆ ಪದವಿ ಪ್ರಮಾಣಪತ್ರವನ್ನು ಡಾ.ವೀರೇಂದ್ರ ಹೆಗ್ಡೆ ಹಾಗೂ ಗಣ್ಯರು ವಿತರಿಸಿದರು. ರ್ಯಾಂಕ್ ಹಾಗೂ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕರ್ನಾಟಕ ರಾಜೀವ್ ಗಾಂಧೀ ಹೆಲ್ತ್ ಸೈಯನ್ಸ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಯು.ಟಿ.ಇಪ್ತಿಕಾರ್ ಆಲಿ, ಝೊಹರಾ ಮೋನು ಕಣಚೂರು, ಕಣಚೂರು ಕಾಲೇಜು ಡೀನ್ ಡಾ.ಮುಹಮ್ಮದ್ ಸುಹೈಲ್, ಕಣಚೂರು ಕಾಲೇಜು ಪಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲೆ ಪ್ರೊ.ಮೊಲ್ಲಿ ಸಲ್ದಾನ ಮೊದಲಾದವರು ಉಪಸ್ಥಿತರಿದ್ದರು.
ಕಣಚೂರು ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ಅಬ್ದುಲ್ ರಹಮಾನ್ ಸ್ವಾಗತಿಸಿದರು. ಡೀನ್ ಡಾ. ಮುಹಮ್ಮದ್ ಸುಹೈಲ್ ವಂದಿಸಿದರು.