ವರ್ಗಾವಣೆ ಬಯಸುವ ವಿದ್ಯಾರ್ಥಿಗಳಿಗೆ ಟಿ.ಸಿ ಪಡೆದುಕೊಳ್ಳಲು ಅವಕಾಶವಿದೆ: ಮಂಗಳೂರು ವಿವಿ ಕುಲಪತಿ
ಹಿಜಾಬ್ ಪ್ರಕರಣ

ಮಂಗಳೂರು, ಮೇ 28: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಒಂದು ಕಾಲೇಜನ್ನು ಬಿಟ್ಟು ಮತ್ತೊಂದು ಕಾಲೇಜಿಗೆ ಪ್ರವೇಶ ಪಡೆಯಲು ಅಗತ್ಯವಾದ ವರ್ಗಾವಣೆ ಪತ್ರ(ಟಿಸಿ)ಯನ್ನು ನೀಡಲು ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ವಿವಿ ಕುಲಪತಿಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಹೋಗುವಾಗ ಹೊಸ ಕಾಲೇಜಿನಲ್ಲಿ ಬೇಕಾದಷ್ಟು ಇಂಟೆಕ್ ಇರಬೇಕು. ವಿದ್ಯಾರ್ಥಿಗೆ ಎರಡು ಕಾಲೇಜಿನಿಂದಲ್ಲೂ ಪತ್ರ ಬೇಕಾಗುತ್ತದೆ. ಹೊಸ ಕಾಲೇಜಿನವರು ಇಂಟೆಕ್ ಜಾಸ್ತಿ ಕೇಳಿದರೆ ಅವರಿಗೆ ಪ್ರವೇಶಾತಿ ಮಿತಿಯನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ. ವಿದ್ಯಾರ್ಥಿಗಳ ವರ್ಗಾವಣೆ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಈ ಪ್ರಕರಣಗಳನ್ನು ವಿಶೇಷ ನೆಲೆಯಲ್ಲಿ ಪರಿಗಣಿಸಿಕೊಂಡು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಮಂಗಳೂರು ವಿವಿಯಡಿಯಲ್ಲಿ ಆರು ಘಟಕ ಕಾಲೇಜುಗಳಿದ್ದು, ಅದರಲ್ಲಿ ಮಂಗಳಗಂಗೋತ್ರಿಯ ಕಾಲೇಜು, ನೆಲ್ಯಾಡಿಯ ಕಾಲೇಜು ಸೇರಿದಂತೆ ಮಂಗಳೂರು ಸಂಧ್ಯಾ ಕಾಲೇಜಿಗೆ ರಾಜ್ಯ ಸರಕಾರದಿಂದ ಅನುಮತಿ ಸಿಕ್ಕಿಲ್ಲ. ಆದರೆ ಉಳಿದಂತೆ ಹಂಪನಕಟ್ಟೆ ಮಂಗಳೂರು ವಿವಿ ಕಾಲೇಜು, ಮೂಡಬಿದಿರೆಯ ಬನ್ನಡ್ಕ ಕಾಲೇಜು, ಮಡಿಕೇರಿಯ ಫೀಲ್ಡ್ ಮಾರ್ಶಲ್ ಕಾರ್ಯಪ್ಪ ಕಾಲೇಜಿಗೆ ಅನುಮತಿ ನೀಡಲಾಗಿದೆ. ಅನುಮತಿ ನೀಡದ ಕಾಲೇಜುಗಳಿಗೆ ಅನುಮತಿ ಪಡೆಯಲು ಪ್ರಯತ್ನಗಳು ಸಾಗಿದ್ದು, ಶೀಘ್ರದಲ್ಲಿಯೇ ದೊರೆಯುವ ಸಾಧ್ಯತೆಯಿದೆ ಎಂದರು.