ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಅತಿ ಹೆಚ್ಚು ಶತಕ: ವಿರಾಟ್ ಕೊಹ್ಲಿ ಅಮೋಘ ದಾಖಲೆ ಸರಿಗಟ್ಟಿದ ಜೋಸ್ ಬಟ್ಲರ್

Photo : IndianPremierLeague
ಅಹಮದಾಬಾದ್, ಮೇ 28: ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು ಗಳಿಸಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿರಾಟ್ ಕೊಹ್ಲಿ ಅವರ ಅಮೋಘ ದಾಖಲೆಯೊಂದನ್ನು ಸರಿಗಟ್ಟಿದರು.
ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಟ್ಲರ್ ಈ ಸಾಧನೆ ಮಾಡಿದರು. ಬಟ್ಲರ್ ಈ ಋತುವಿನ ಐಪಿಎಲ್ನಲ್ಲಿ ನಾಲ್ಕನೇ ಬಾರಿ ಶತಕ ಸಿಡಿಸಿದರು.
ಈ ಹಿಂದೆ 2016ರಲ್ಲಿ ಕೊಹ್ಲಿ ನಾಲ್ಕು ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದರು. ಅದೇ ವರ್ಷ ಕೊಹ್ಲಿ ಅವರು ಒಟ್ಟು 973 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿರುವ ಗರಿಷ್ಠ ರನ್ ಅದಾಗಿದೆ.
ಈ ವರ್ಷದ ಐಪಿಎಲ್ನಲ್ಲಿ ಇಂಗ್ಲೆಂಡ್ನ ಬಟ್ಲರ್ 151.47ರ ಸ್ಟ್ರೈಕ್ರೇಟ್ನಲ್ಲಿ 58.86ರ ಸರಾಸರಿಯಲ್ಲಿ ಒಟ್ಟು 824 ರನ್ ಗಳಿಸಿದ್ದಾರೆ. ಬಟ್ಲರ್ 4 ಶತಕವಲ್ಲದೆ 4 ಅರ್ಧಶತಕವನ್ನೂ ಸಿಡಿಸಿದ್ದಾರೆ.
2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಟ್ಲರ್ ಭರ್ಜರಿ ಬ್ಯಾಟಿಂಗ್, ನಾಯಕ ಸಂಜು ಸ್ಯಾಮ್ಸನ್ ಸಾಂದರ್ಭಿಕ ಆಟದ ಸಹಾಯದಿಂದ ರಾಜಸ್ಥಾನ ತಂಡವು 18.1 ಓವರ್ಗಳಲ್ಲಿ 158 ರನ್ ಗುರಿ ತಲುಪಿತು. ಇದಕ್ಕೂ ಮೊದಲು ತಲಾ 3 ವಿಕೆಟ್ಗಳನ್ನು ಕಬಳಿಸಿರುವ ಪ್ರಸಿದ್ಧ ಕೃಷ್ಣ ಹಾಗೂ ಒಬೆಡ್ ಮೆಕಾಯ್ ಬೆಂಗಳೂರು ತಂಡವನ್ನು 157 ರನ್ಗೆ ನಿಯಂತ್ರಿಸಿದರು.