ಮಣಿಪಾಲದಲ್ಲಿ ವಿಶ್ವ ಥೈರಾಯ್ಡ್ ದಿನದ ಜಾಗೃತಿ ಕಾರ್ಯಕ್ರಮ

ಉಡುಪಿ, ಮೇ28: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ(ಎಂಡೋಕ್ರಿನೊಲೊಜಿ )ವಿಭಾಗವು ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಥೈರಾಯ್ಡ್ ಜಾಗೃತಿ ಮತ್ತು ಉಚಿತ ಥೈರಾಯ್ಡ್ ತಪಾಸಣೆಯನ್ನು ಆಯೋಜಿಸಿತ್ತು.
ಪ್ರತಿ ವರ್ಷ ಮೇ 25ಅನ್ನು ವಿಶ್ವ ಥೈರಾಯ್ಡ್ ದಿನ ಮತ್ತು ಮೇ 22ರಿಂದ ಮೇ 28ರವರೆಗೆ ಅಂತಾರಾಷ್ಟ್ರೀಯ ಥೈರಾಯ್ಡ್ ಜಾಗೃತಿ ವಾರವನ್ನಾಗಿ ಆಚರಿಸ ಲಾಗುತ್ತದೆ. ವಿಶ್ವ ಥೈರಾಯ್ಡ್ ದಿನ ಥೈರಾಯ್ಡ್ ಕಾಯಿಲೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಥೈರಾಯ್ಡ್ ಉತ್ಪಾದಿಸುವ ಹಾರ್ಮೋನ್ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಇದರ ಅಂಶ ಹೆಚ್ಚಾದರೂ ತೊಂದರೆ ಕಡಿಮೆಯಾದರೂ ತೊಂದರೆ. ಆದ್ದರಿಂದ ಇದನ್ನು ಸಮತೋಲನದಲ್ಲಿ ಇಟ್ಟು ಕೊಳ್ಳಬೇಕು. ಇದಕ್ಕಾಗಿ ವರ್ಷಕೊಮ್ಮೆಯಾದರೂ ಥೈರಾಯ್ಡೆ ಪರೀಕ್ಷೆ ಮಾಡಿಸಿ ಕೊಂಡು ಅವಶ್ಯವಿದ್ದರೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿಯ ವೈದ್ಯಕೀಯ ಅೀಕ್ಷಕ ಡಾ. ಅವಿನಾಶ ಶೆಟ್ಟಿ, ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಈ ತೊಂದರೆ ಕಂಡುಬರುತ್ತದೆ ಮತ್ತು ಆರಂಭದಲ್ಲಿ ಇದು ಗೊತ್ತೇ ಆಗುವುದಿಲ್ಲ. ಹೀಗಾಗಿ ರೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯ. ಏಕೆಂದರೆ ಯಾವುದೇ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರು.
ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಡಾ. ಸಹನಾ ಶೆಟ್ಟಿ ನೇತೃತ್ವದ ಅಂತಃಸ್ರಾವಶಾಸ (ಎಂಡೋಕ್ರಿನೊಲೊಜಿ )ವಿಭಾಗ ಉಚಿತವಾಗಿ ಥೈರಾಯ್ಡ್ ಪರೀಕ್ಷೆ ಮತ್ತು ಕಾಯಿಲೆಯ ಕುರಿತು ಜಾಗೃತಿ ಮೂಡಿಸಿತು. ಡಾ. ಸಹನಾ ಶೆಟ್ಟಿ ಥೈರಾಯ್ಡ್ ಕಾಯಿಲೆ ಮತ್ತು ಚಿಕಿತ್ಸಾ ಕ್ರಮದ ಬಗ್ಗೆವಿವರವಾಗಿ ಮಾತನಾಡಿದರು. ಒಂದು ಸಾವಿರಕ್ಕೂ ಹೆಚ್ಚು ಜನರು ಉಚಿತ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಂಡು ಇದರ ಪ್ರಯೋಜನ ಪಡೆದರು.