ಪ್ರೊ.ಕೆ.ಆರ್. ಹಂದೆ ಸಂಸ್ಮರಣ ಉಪನ್ಯಾಸ

ಉಡುಪಿ, ಮೇ 28: ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕ ಎ.ಪಿ.ಕೊಡಂಚ ಅವರು ಪ್ರೊ. ಕೆ.ಆರ್.ಹಂದೆ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
‘ಶಾಲೆಗಳಲ್ಲಿ ಗ್ರಾಹಕ ಸಂಘಗಳು’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದ ಕೊಡಂಚ, ಗ್ರಾಹಕ ಸಂಘಗಳ ಸ್ಥಾಪನೆಯ ಉದ್ದೇಶ, ಸದಸ್ಯತ್ವ, ಚಟುವಟಿಕೆಗಳು, ಸರಕಾರದಿಂದ ದೊರೆಯುವ ಅನುದಾನ, ಶಿಕ್ಷಕ ಸಂಚಾಲಕರ ಕರ್ತವ್ಯಗಳು ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.
ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೂಡಿದ ಗ್ರಾಹಕ ಜಾಗೃತಿಯ ಬಗ್ಗೆಯೂ ನಿದರ್ಶನಗಳನ್ನು ನೀಡಿದ ಅವರು 2019 ರಿಂದ ಈಚೆಗೆ ಬಂದಿರುವ ಹೊಸ ಗ್ರಾಹಕ ರಕ್ಷಣಾ ಕಾನೂನು ಹೆಚ್ಚು ಗ್ರಾಹಕ ಸ್ನೇಹಿಯಾಗಿದ್ದು, ಪ್ರಬಲವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಕಾರಿ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರೂ, ಡಾ ಟಿಎಂಎ ಪೈ ಮಾನವ ಸಂಪದಭಿವೃದ್ಧಿ ಕೇಂದ್ರದ ನಿರ್ದೇಶಕರೂ ಆಗಿದ್ದ ದಿ.ಪ್ರೊ.ಕೆ.ಆರ್. ಹಂದೆಯವರು ಶಿಕ್ಷಕರ ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡು ಅವರು ಬರೆದಿರುವ ಶೈಕ್ಷಣಿಕ ಮಹತ್ವದ ಕೃತಿಗಳನ್ನು ವಿದ್ಯಾರ್ಥಿ -ಶಿಕ್ಷಕರು ಮನನ ಮಾಡಬೇಕೆಂದು ಕರೆ ನೀಡಿದರು.
ಧನಲಕ್ಷ್ಮೀ ಸ್ವಾಗತಿಸಿದರೆ, ಪ್ರೀತಿ ಎಸ್ ರಾವ್ ವಂದಿಸಿದರು. ಮಮತಾ ಸಾಮಂತ್ ಪರಿಚಯಿಸಿ ರೂಪಾ ಕೆ. ನಿರೂಪಿಸಿದರು.