ವಿದ್ಯಾರ್ಥಿಗಳ ವಿಕಸನದಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಪ್ರೊ.ಖಾಜಾ ಪೀರ್

ಬೆಂಗಳೂರು, ಮೇ 28: ವಿದ್ಯಾರ್ಥಿಗಳ ಸಾಮಥ್ರ್ಯಕ್ಕೆ ಅನುಗುಣವಾಗಿ ಶಿಕ್ಷಕರು ಜ್ಞಾನದ ಹಂಚಿಕೆಯನ್ನು ಮಾಡಬೇಕು. ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕ ವಿಕಸನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಖಾಜಾ ಪೀರ್ ಹೇಳಿದರು.
ಶನಿವಾರ ಇಂದಿರಾನಗರದ ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಹಾಗೂ ಇಸ್ಲಾಮಿಕ್ ಪ್ರದರ್ಶನ ಮತ್ತು 2022ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ತುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವಾರು ಅಧ್ಯಯನಗಳ ಪ್ರಕಾರ ಮಕ್ಕಳು ಬಾಲ್ಯದಲ್ಲಿ ಕನಿಷ್ಠ 5-6 ಭಾಷೆಗಳನ್ನು ಕಲಿಯುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂಬುದು ಸಾಬೀತಾಗಿದೆ. ಆದುದರಿಂದ, ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ಮಕ್ಕಳಿಗೆ ಭಾಷೆಯ ಕಲಿಕೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಮಾಡಬೇಕು ಎಂದು ಖಾಜಾ ಪೀರ್ ಹೇಳಿದರು.
ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ. ಇವತ್ತು ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿಯೂ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ನಿವೃತ್ತ ಡಿಸಿಪಿ ಎನ್.ಡಿ.ಮುಲ್ಲಾ ಮಾತನಾಡಿ, ಎಲ್ಲ ಧರ್ಮಗಳ ಮೂಲ ಸತ್ಯ ಹಾಗೂ ಸನ್ಮಾರ್ಗವಾಗಿದೆ. ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಸರಿಯಾದ ಮಾರ್ಗವನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ. ದೇಶ ಸೇವೆ ಹಾಗೂ ಸರ್ವಧರ್ಮ ಸಮನ್ವಯದ ಭಾವನೆ ನಮ್ಮಲ್ಲಿ ಸದಾಕಾಲ ಇರಬೇಕು ಎಂದರು.
ಶಿವಾಜಿನಗರದ ವಿ.ಕೆ.ಉಬೇದುಲ್ಲಾ ಶಾಲೆಯಲ್ಲಿ ಇತ್ತೀಚೆಗೆ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 38 ಮಂದಿ ವಿದ್ಯಾರ್ಥಿನಿಯರ ಪೈಕಿ 24 ಮಂದಿ ಹಾಗೂ 36 ವಿದ್ಯಾರ್ಥಿಗಳ ಪೈಕಿ 30 ಮಂದಿ ಕನ್ನಡ ಭಾಷೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ನಮ್ಮ ಭಾಷೆ ಅದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಜೊತೆಗೆ, ಇತರ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳು ಹಿಂದೇಟು ಹಾಕಬಾರದು ಎಂದರು.
ಇದೇ ಸಂದರ್ಭದಲ್ಲಿ ಎನ್.ಡಿ.ಮುಲ್ಲಾ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು. ಭಾರತೀಯ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಚಿಕ್ಕಪ್ಪಯ್ಯ ಅವರು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡುವುದಾಗಿ ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಸಲ್ ಸಬೀಲ್ ಎಜುಕೇಷನಲ್ ಟ್ರಸ್ಟ್‍ನ ಕಾರ್ಯದರ್ಶಿ ಝಿಯಾಉಲ್ಲಾ ಖಾನ್, ಟ್ರಸ್ಟಿಗಳಾದ ಮುಹಮ್ಮದ್ ಯೂಸುಫ್, ನಿಸಾರ್ ಅಹ್ಮದ್, ಮುಹಮ್ಮದ್ ಇಬ್ರಾಹಿಮ್ ಶಫೀಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







