50 ಸಾವಿರ ಪ್ರಕರಣಗಳ ವಿಲೇವಾರಿ: ನ್ಯಾಯಮೂರ್ತಿ ಆರ್.ಕೆ. ಅಗರ್ವಾಲ್

ಬೆಂಗಳೂರು, ಮೇ 28: ‘ಕರ್ನಾಟಕ ರಾಜ್ಯ ಆಯೋಗವು ಬಾಕಿ ಉಳಿದಿರುವ ದೂರುಗಳ ತ್ವರಿತ ವಿಲೇವಾರಿಯಲ್ಲಿ ಗಮನಾರ್ಹ ಕೆಲಸ ಮಾಡಿದ್ದು, 2022ರ ಮಾರ್ಚ್ 31ರವರೆಗೆ ಸುಮಾರು 50 ಸಾವಿರ ಪ್ರಕರಣಗಳನ್ನು ವಿಲೇ ಮಾಡಿದೆ' ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಆರ್.ಕೆ.ಅಗರ್‍ವಾಲ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವತಿಯಿಂದ ರಾಜ್ಯ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಎಲ್ಲ ಜಿಲ್ಲಾ ಗ್ರಾಹಕರ ಆಯೋಗಗಳ ಅಧ್ಯಕ್ಷರ ಸಕ್ಷಮದಲ್ಲಿ ಗ್ರಾಹಕ ವ್ಯಾಜ್ಯಗಳನ್ನು ಕಾಯ್ದೆ ಅನುಸಾರ ನಿಗದಿತ ಕಾಲಾವಧಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆ ಹಾಗೂ ಜಿಲ್ಲಾ ಆಯೋಗಗಳ ಕಾರ್ಯಪ್ರಗತಿ, ಮೂಲಭೂತ ಸೌಕರ್ಯ ಇನ್ನಿತರೆ ಅಂಶಗಳನ್ನು ಇತ್ಯರ್ಥಪಡಿಸುವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
‘ಆಯೋಗದ ಮುಂದೆ ಸುಮಾರು 10 ಸಾವಿರ ಪ್ರಕರಣಗಳು ತೀರ್ಪಿಗಾಗಿ ಬಾಕಿ ಉಳಿದಿದ್ದು, ಇನ್ನುಳಿದಂತೆ ಸುಮಾರು 11 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಎರಡು ವರ್ಷಗಳಲ್ಲಿ ಸುಮಾರು 2.16 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ' ಎಂದ ಅವರು, ‘ಕೋವಿಡ್ ಸಮಯದಲ್ಲೂ ತಂತ್ರಜ್ಞಾನ ಹಾಗೂ ವರ್ಚುವಲ್ ಮೂಲಕ ವಿಚಾರಣೆಗಳನ್ನು ನಡೆಸಿ ನ್ಯಾಯಾಲಯಗಳು ಎಂದಿನಂತೆ ಕೆಲಸ ನಿರ್ವಹಿಸಿದೆ' ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು, ಸದಸ್ಯರುಗಳು, ಜಿಲ್ಲಾ ಗ್ರಾಹಕರ ಆಯೋಗಗಳ ಸದಸ್ಯರುಗಳು ಉಪಸ್ಥಿತರಿದ್ದರು.







