ಮೇ 31ರಂದು ಅಭ್ಯರ್ಥಿಗಳ ಪರವಾಗಿ ಕೆಪಿಎಸ್ಸಿ ಮುಖ್ಯದ್ವಾರದ ಮುಂದೆ ನಿಲ್ಲುತ್ತೇನೆ: ಸುರೇಶ್‍ಕುಮಾರ್

ಬೆಂಗಳೂರು, ಮೇ 28: 2021ರ ಫೆಬ್ರವರಿ ತಿಂಗಳಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನದ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಅಭ್ಯರ್ಥಿಗಳ ಪರವಾಗಿ ಮೇ 31ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮುಖ್ಯದ್ವಾರದ ಮುಂದೆ ನಿಲ್ಲುವವನಿದ್ದೇನೆ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕೆಪಿಎಸ್ಸಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಆಗಲಾದರೂ ಕೆಪಿಎಸ್ಸಿ ಅಧಿಕಾರಿಗಳು 2021ರ ಫೆಬ್ರವರಿ ತಿಂಗಳಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನದ ಪ್ರಸ್ತುತ ಹಂತದ ಕುರಿತು ಮಾಹಿತಿ ನೀಡುತ್ತಾರೆಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
2021ರ ಫೆಬ್ರವರಿ ತಿಂಗಳಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನದ ಪ್ರಕ್ರಿಯೆ ಈವರೆಗೂ ಪ್ರಾರಂಭವಾಗಿದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ಯಾವುದೆ ಮಾಹಿತಿ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಾನು ಈ ಕುರಿತು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದು ಈ ಯುವಕರು ಭರವಸೆ ಕಳೆದುಕೊಳ್ಳುವ ಮುನ್ನ ಮೌಲ್ಯಮಾಪನ ಕುರಿತು ಮಾಹಿತಿ ನೀಡಿ ಎಂದು ಕೇಳಿದ್ದೇನೆ. ಆದರೆ, ಈವರೆಗೂ ಈ ಕುರಿತು ಯಾವುದೆ ಮಾಹಿತಿ ನನಗಾಗಲಿ ಅಥವಾ ಅಭ್ಯರ್ಥಿಗಳಿಗಾಗಲಿ ಲಭ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆದುದರಿಂದ, ಈ ಕುರಿತಾದ ಮಾಹಿತಿ ಪಡೆಯಲು ಅಭ್ಯರ್ಥಿಗಳ ಪರವಾಗಿ ಮೇ 31ರಂದು ರಾಜ್ಯ ಲೋಕಸೇವಾ ಆಯೋಗದ ಮುಖ್ಯ ದ್ವಾರದ ಮುಂದೆ ನಿಲ್ಲುವವನಿದ್ದೇನೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.







