ಹೈದರಪೋರಾ ಎನ್‌ಕೌಂಟರ್: ಮೃತಪಟ್ಟ ವ್ಯಕ್ತಿಯ ಮೃತದೇಹ ಹೊರ ತೆಗೆಯಲು ಕುಟುಂಬಕ್ಕೆ ಹೈಕೋರ್ಟ್ ಅನುಮತಿ

ಶ್ರೀನಗರ, ಮೇ 28 : ಶ್ರೀನಗರದಲ್ಲಿ ನಡೆದ ವಿವಾದಾತ್ಮಕ ಎನ್ಕೌಂಟರ್ನಲ್ಲಿ ನಾಲ್ವರು ಮೃತಪಟ್ಟ 6 ತಿಂಗಳ ಬಳಿಕ ಜಮ್ಮು ಹಾಗೂ ಕಾಶ್ಮೀರ ಹಾಗೂ ಲಡಾಕ್ನ ಉಚ್ಚ ನ್ಯಾಯಾಲಯ ಅಂತ್ಯಕ್ರಿಯೆ ನಡೆಸಲು ಎನ್ಕೌಂಟರ್ನಲ್ಲಿ ಬಲಿಯಾದ ವ್ಯಕ್ತಿಯ ಮೃತದೇಹ ಹೊರ ತೆಗೆಯಲು ಆತನ ಕುಟುಂಬಕ್ಕೆ ಶುಕ್ರವಾರ ಅನುಮತಿ ನೀಡಿದೆ.
‘‘ಭಾರತದ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಘನತೆ ಹಾಗೂ ನ್ಯಾಯಯುತವಾಗಿ ನಡೆಸಿಕೊಳ್ಳುವ ಹಕ್ಕು ಜೀವಂತ ಇರುವ ವ್ಯಕ್ತಿಗೆ ಮಾತ್ರವಲ್ಲ, ಸಾವಿನ ಬಳಿಕ ಆತನ ಮೃತದೇಹಕ್ಕೆ ಕೂಡ ಇದೆ’’ ಎಂದು ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿರುವ ಉಚ್ಚ ನ್ಯಾಯಾಲಯ ಮುಹಮ್ಮದ್ ಲತೀಫ್ ಮಾಗ್ರೆ ಕುಟುಂಬಕ್ಕೆ ಮೃತದೇಹವನ್ನು ಹೊರ ತೆಗೆಯಲು ಅನುಮತಿ ನೀಡಿದೆ.
‘‘ತಮ್ಮ ಪ್ರೀತಿ ಪಾತ್ರರಾದವರ ಮೃತದೇಹವನ್ನು ಸಾಂಪ್ರದಾಯಿಕ, ಧಾರ್ಮಿಕ ಕಟ್ಟುಪಾಡು ಹಾಗೂ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ದಹನ ಅಥವಾ ಧಫನ ಮಾಡಲು ಆಗ್ರಹಿಸುವ ಹಕ್ಕು ಹೆತ್ತವರಿಗೆ ಹಾಗೂ ಸಮೀಪದ ಸಂಬಂಧಿಕರಿಗೆ ಇದೆ. ಮೃತದೇಹವನ್ನು ಆತನ ಹುಟ್ಟೂರಲ್ಲಿ ದಹನ ಅಥವಾ ದಫನ ಮಾಡುವ ಆಯ್ಕೆಯನ್ನು ಕೂಡ ಈ ಹಕ್ಕು ಒಳಗೊಂಡಿದೆ’’ ಎಂದು ನ್ಯಾಯಾಲಯ ಹೇಳಿದೆ.
ಅಮೀರ್ ಅವರ ತಂದೆ ಮುಹಮ್ಮದ್ ಲತೀಫ್ ಮಾಗ್ರೆ ಪುತ್ರನ ಮೃತದೇಹವನ್ನು ಕೋರಿ ಕಳೆದ ವರ್ಷ ಡಿಸೆಂಬರ್ 30ರಂದು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ನ್ಯಾಯವಾದಿ ದೀಪಿಕಾ ಸಿಂಗ್ ರಾಜಾವತ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ಲತೀಫ್ ಅವರು, ಮೃತಪಟ್ಟ ಪುತ್ರನ ಮೃತದೇಹವನ್ನು ಹಸ್ತಾಂತರಿಸುವಂತೆ ಕೋರಿ ತಾನು ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಿದ್ದೆ. ಆದರೆ, ತನ್ನ ಬೇಡಿಕೆಗೆ ಯಾರೂ ಸ್ಪಂದಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
‘‘ಉಚ್ಚ ನ್ಯಾಯಾಲಯದ ತೀರ್ಪಿನಿಂದ ನಾವು ಸಂತುಷ್ಟರಾಗಿದ್ದೇವೆ’’ ಎಂದು ತನ್ನ ಊರಾದ ಜಮ್ಮುವಿನ ರಾಂಬಾನ್ ಜಿಲ್ಲೆಯಿಂದ ಫೋನ್ ಮೂಲಕ ಸುದ್ದಿ ಸಂಸ್ಥೆಯೊಂದಕ್ಕೆ ಮುಹಮ್ಮದ್ ಲತೀಫ್ ಮಾಗ್ರೆ ತಿಳಿಸಿದ್ದಾರೆ. ‘‘ನಮಗೆ ಪರಿಹಾರದ ಅಗತ್ಯ ಇಲ್ಲ. ಮೃತದೇಹವನ್ನು ಮನೆಗೆ ತರಲು ಮಾತ್ರ ನಾವು ಬಯಸಿದ್ದೇವೆ. ಮೃತಪಟ್ಟ ನನ್ನ ಪುತ್ರ ಹಿಂದೆ ಬರಲಾರ. ಆದರೆ, ಆತನ ಸಮಾಧಿ ಆದರೂ ನಮ್ಮ ಕಣ್ಣ ಮುಂದಿದ್ದರೆ, ಅಲ್ಲಿ ನಾವು ಆತನಿಗಾಗಿ ಪ್ರಾರ್ಥಿಸಲು ಸಾಧ್ಯ’’ ಎಂದು ಅವರು ಹೇಳಿದ್ದಾರೆ.







