ಬರಗಾಲಕ್ಕೆ ತುತ್ತಾದ ವನ್ವಾಟು: ಹವಾಮಾನ ತುರ್ತುಪರಿಸ್ಥಿತಿ ಘೋಷಣೆ
ಪೋರ್ಟ್ವಿಲಾ, ಮೇ 28: ಪೆಸಿಫಿಕ್ ವಲಯದ ದ್ವೀಪರಾಷ್ಟ್ರ ವನ್ವಾಟುವಿನಲ್ಲಿ ಹವಾಮಾನ ತುರ್ತು ಪರಿಸ್ಥಿತಿಯನ್ನು ಅಲ್ಲಿನ ಸಂಸತ್ತು ಘೋಷಿಸಿದೆ ಎಂದು ವರದಿಯಾಗಿದೆ. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಬಾಬ್ ಲಾಘ್ಮನ್, ಸಮುದ್ರ ಮಟ್ಟ ಏರಿಕೆ, ತೀವ್ರ ತಾಪಮಾನ ಮುಂತಾದ ಹವಾಮಾನ ವೈಪರೀತ್ಯಗಳಿಂದ ದೇಶಕ್ಕೆ ಈಗಾಗಲೇ ಹಲವು ಸಮಸ್ಯೆಗಳು ಎದುರಾಗಿವೆ. ಕಳೆದ ದಶಕದಲ್ಲಿ 2 ತೀವ್ರ ಚಂಡಮಾರುತ ಹಾಗೂ ಆ ಬಳಿಕ ಗಂಭೀರ ಪ್ರಮಾಣದ ಕ್ಷಾಮಕ್ಕೆ ದೇಶ ತುತ್ತಾಗಿದೆ.
ಜಾಗತಿಕ ತಾಪಮಾನದ ಪ್ರಭಾವವನ್ನು ನಿಯಂತ್ರಿಸಲು 1.2 ಬಿಲಿಯನ್ ಡಾಲರ್ ಮೊತ್ತದಷ್ಟು ವೆಚ್ಚವಾಗಲಿದೆ ಎಂದು ಹೇಳಿದರು. ಭೂಮಿ ಈಗಾಗಲೇ ಅತ್ಯಂತ ಬಿಸಿಯಾಗಿದ್ದು ಅಸುರಕ್ಷಿತವಾಗಿದೆ. ನಾವೀಗ ಅಪಾಯದಲ್ಲಿದ್ದೇವೆ. ಈಗ ಎದುರಾಗಿರುವ ಬಿಕ್ಕಟ್ಟಿನ ಅಗಾಧತೆಯನ್ನು ಗಮನದಲ್ಲಿಟ್ಟುಕೊಂಡು ಇತರ ದೇಶಗಳೂ ಇದೇ ರೀತಿಯ ಕ್ರಮ ಕೈಗೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ತುರ್ತು ಪರಿಸ್ಥಿತಿ ಪದದ ಬಳಕೆಯು ಎಂದಿನಂತೆ ಸುಧಾರಣೆಯನ್ನು ಮೀರಿ ಸಾಗುವ ಅಗತ್ಯವನ್ನು ಸೂಚಿಸುವ ಒಂದು ಮಾರ್ಗವಾಗಿದೆ ಎಂದವರು ಹೇಳಿದ್ದಾರೆ. ಹವಾಮಾನ ತುರ್ತು ಪರಿಸ್ಥಿತಿ ಘೋಷಿಸುವ ನಿರ್ಣಯಕ್ಕೆ ಸಂಸತ್ತು ಅವಿರೋಧ ಬೆಂಬಲ ಸೂಚಿಸಿದೆ. ಬಳಿಕ ಬ್ರಿಟನ್, ಕೆನಡಾ, ಫಿಜಿ ದೇಶ ಸಹಿತ 12ಕ್ಕೂ ಅಧಿಕ ದೇಶಗಳು ಇದೇ ರೀತಿಯ ಘೋಷಣೆ ಹೊರಡಿಸಿವೆ.