ಫುಟ್ಬಾಲ್; ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್
(Photo | AP)
ಪ್ಯಾರೀಸ್: ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದ ರಿಯಲ್ ಮ್ಯಾಡ್ರಿಡ್ ತಂಡ ಫುಟ್ಬಾಲ್ನಲ್ಲಿ ಯೂರೋಪ್ನ ವಿವಾದಾತೀತ ನಾಯಕ ಎನಿಸಿಕೊಂಡಿದೆ.
ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂನ ಹೊರಗೆ ನಡೆದ ಅಹಿತಕರ ಘಟನೆಗಳಿಂದಾಗಿ 37 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಲಿವರ್ಪೂಲ್ ತಂಡವನ್ನು 1-0 ಗೋಲುಗಳಿಂದ ಮಣಿಸಿದ ರಿಯಲ್ ಮ್ಯಾಡ್ರಿಡ್, ದಾಖಲೆ 14ನೇ ಬಾರಿಗೆ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು.
ಹತ್ತು ತಿಂಗಳ ಹಿಂದೆ ವೆಂಬ್ಲೆ ಸ್ಟೇಡಿಯಂನಲ್ಲಿ ಯೂರೋಪಿಯನ್ ಚಾಂಪಿಯನ್ಶಿಪ್ ಫೈನಲ್ ವೇಳೆ ನಡೆದ ಹಿಂಸಾಚಾರವನ್ನು ನೆನಪಿಸುವ ಘಟನೆ ಪಂದ್ಯ ಆರಂಭಕ್ಕೆ ಮುನ್ನ ಸ್ಟೇಡ್ ಡೇ ಫ್ರಾನ್ಸ್ ನಲ್ಲೂ ನಡೆಯಿತು.
59ನೇ ನಿಮಿಷದಲ್ಲಿ ಫೆಡೆರಿಕೊ ವಾಲ್ವೇರ್ಡ್ ಅವರ ಡ್ರೈವ್ ಅನ್ನು ಗೋಲುಪೆಟ್ಟಿಗೆಗೆ ಸೇರಿಸಿದ ಬ್ರೆಝಿಲ್ನ ವಿಂಜೆರ್ ವಿನಿಶಿಯಸ್ ಜ್ಯೂನಿಯರ್, ಗೆಲುವಿನ ರೂವಾರಿ ಎನಿಸಿದರು.
ಈ ಗೆಲುವಿನೊಂದಿಗೆ ಮ್ಯಾಡ್ರಿಡ್ ಕೋಚ್ ಕಾರ್ಲೊ ಅನ್ಸೆಲೆಟ್ಟೊ ಅವರಿಗೆ ನಾಲ್ಕನೇ ಯೂರೋಪಿಯನ್ ಕಪ್ ಪ್ರಶಸ್ತಿ ಗೆದ್ದುಕೊಟ್ಟಂತಾಗಿದೆ. ಇದು ಕೂಡಾ ಕೋಚ್ ಒಬ್ಬರ ಮಾರ್ಗದರ್ಶನದಲ್ಲಿ ಒಂದು ತಂಡ ಅತಿಹೆಚ್ಚು ಬಾರಿ ಪ್ರಶಸ್ತಿ ಪಡೆದ ದಾಖಲೆಗೆ ಪಾತ್ರವಾಯಿತು.