ಕಲ್ಲಡ್ಕ: ಬಾವಿಗೆ ಬಿದ್ದು ನವ ವಿವಾಹಿತೆ ಮೃತ್ಯು

ಬಂಟ್ವಾಳ :ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿಯೋರ್ವಳು ನೀರು ಸೇದುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ಕಲ್ಲಡ್ಕದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬಿ.ಸಿ.ರೋಡ್ ತಲಪಾಡಿ ನಿವಾಸಿ, ಪ್ರಸಕ್ತ ಫರಂಗಿಪೇಟೆ ಸಮೀಪದ ಅಮ್ಮೆಮ್ಮಾರ್ ನಲ್ಲಿ ವಾಸವಿರುವ ಮುಹಮ್ಮದ್ ಎಂಬವರ ಪುತ್ರಿ ಮುನೀಝಾ (20) ಮೃತರು ಎಂದು ತಿಳಿದುಬಂದಿದೆ.
ಎರಡು ತಿಂಗಳ ಹಿಂದೆ ಮುನೀಝಾ ಅವರನ್ನು ಕಲ್ಲಡ್ಕ ನಿವಾಸಿ ಇಬ್ರಾಹಿಂ ತೌಸೀರ್ ಎಂಬವರಿಗೆ ವಿವಾಹವಾಗಿದ್ದು ಎಂದಿನಂತೆ ಇಂದು ಬೆಳಗ್ಗೆ ನೀರಿಗಾಗಿ ಅವರು ಕೊಡದೊಂದಿಗೆ ಬಾವಿ ಕಡೆಗೆ ತೆರಳಿದ್ದರು ಎನ್ನಲಾಗಿದೆ.
ಸುಮಾರು ಹೊತ್ತು ಕಳೆದರೂ ಮುನೀಝಾ ಬಾರದಿರುವುದನ್ನು ಗಮಿಸಿದ ಮನೆಯವರು ಬಾವಿ ಕಡೆ ತೆರಳಿ ನೋಡಿದಾಗ ಕೊಡ ಬಾವಿ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಬಳಿಕ ಮುನೀಝಾ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





