ಡಿಸೆಂಬರ್ ಅಥವಾ ಜನವರಿಗೆ ಸ್ಮಾರ್ಟ್ ಸಿಟಿ ಯೋಜನೆಗಳು ಸಾರ್ವಜನಿಕರ ಬಳಕೆಗೆ
ಮಂಗಳೂರು ಸ್ಮಾಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ೯೩೧ ಕೋ.ರೂ.ಗಳ ವೆಚ್ಚದಲ್ಲಿ ನಡೆಯುವ ಕಾಮಗಾರಿಗಳು ಮುಂದಿನ ಡಿಸೆಂಬರ್ ಅಥವಾ ಜನವರಿಯೊಳಗೆ ಪೂರ್ಣಗೊಳ್ಳಲಿದ್ದು, ಆ ಬಳಿಕ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ರವಿವಾರ ಪರಿಶೀಲಿಸಿದ ಬಳಿಕ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ನಗರದಲ್ಲಿ ನಡೆಯುವ ೪೮ ಕಾಮಗಾರಿಗಳ ಪೈಕಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಇವುಗಳು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ಅವುಗಳ ಲಾಭ ಸಂಪೂರ್ಣವಾಗಿ ಜಿಲ್ಲೆಯ ಜನತೆಗೆ ದೊರೆಯಬೇಕು. ಕೆಲವು ಕಾಮಗಾರಿಗಳನ್ನು ಸಂಪೂರ್ಣವಾಗಿ ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ವಹಿಸಲಾಗುತ್ತಿದೆ. ಅವುಗಳಿಗೆ ವೇಗ ನೀಡಿ ಡಿಸೆಂಬರ್ ಅಥವಾ ಜನವರಿ ವೇಳೆಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾ ಗಿದೆ ಎಂದು ಸುನೀಲ್ ಕುಮಾರ್ ನುಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಮುಖವಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗುತ್ತಿದೆ. ಬಹುಶಃ ರಾಜ್ಯದಲ್ಲಿರುವ ಅತಿ ಪ್ರಮುಖ ಈಜುಕೊಳದಲ್ಲಿ ಇದು ಒಂದಾಗಲಿದೆ. ಇದನ್ನು ಉತ್ತಮವಾಗಿ ಬಳಸಿದರೆ ರಾಜ್ಯ ಹಾಗೂ ಅಂತರ್ ರಾಜ್ಯ ಕ್ರೀಡಾ ಪಟುಗಳನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಪೈಕಿ ಕದ್ರಿ ಪಾರ್ಕ್ ಕಾಮಗಾರಿ ಶೇ.೯೦ರಷ್ಟು ಪೂರ್ಣಗೊಂಡಿದೆ ಕುಟುಂಬದ ಸದಸ್ಯರು ವಿಹರಿಸಲು ಸಾಧ್ಯವಾಗುವ ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ವಾಹನ ನಿಲುಗಡೆಗೆ ಸಮಸ್ಯೆ ಬಗೆಹರಿಸಲು ಚರ್ಚೆ ನಡೆದಿದ್ದು, ಪರಿಹಾರ ಕಲ್ಪಿಸಿಕೊಡಲಾಗುವುದು ಎಂದರು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಗರದ ಸರ್ವಿಸ್ ಬಸ್‌ನಿಲ್ದಾಣ ಸಮಸ್ಯೆಗಳನ್ನು ಬಗೆಹರಿಸಿ, ಶಾಶ್ವತ ಕಾಯಕಲ್ಪನೀಡಲು ವ್ಯವಸ್ಥಿತ ಕೆಲಸಗಳು ನಡೆಯುತ್ತಿದೆ. ಇದುವರೆಗೆ ಇದ್ದ ಎಲ್ಲಾ ತೊಡಕುಗಳನ್ನು ನೀಗಿಸಿ ಉತ್ತಮ ಸರ್ವಿಸ್ ಬಸ್ ನಿಲ್ದಾಣ ಕೆಲವೇ ತಿಂಗಳಲ್ಲಿ ನಿರ್ಮಾಣವಾಗಲಿದೆ ಎಂದ ಸಚಿವರು ಭೇಟಿ ನೀಡಿದ ಕೆಲವೆಡೆ ಸಮಸ್ಯೆಗಳ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.
ಕೆಲವೊಂದು ಕಡೆ ಮಾರ್ಪಾಡುಗಳನ್ನು ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಬಗ್ಗೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದಾಗಿ ಜನಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲು ತಿಳಿಸಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಸಚಿವರು ಮನವಿ ಮಾಡಿದರು.
ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಸ್ಮಾರ್ಟ್ ಸಿಟಿ ಎಂಡಿ ಪ್ರಶಾಂತ್ ಕುಮಾರ್ ಮಿಶ್ರ, ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಾದ ಅರುಣ್ ಪ್ರಭಾ, ಕೆ.ಎಸ್. ಲಿಂಗೇಗೌಡ, ಚಂದ್ರಕಾಂತ್, ರಾಘವೇಂದ್ರ, ಮಂಜು ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.
ಭೇಟಿ ನೀಡಿದ ಸ್ಥಳಗಳಿವು: ನಗರದ ಉರ್ವ ಮಾರ್ನಮಿಕಟ್ಟೆ ಬಳಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಮಂಗಳಾ ಸ್ಟೇಡಿಯಂ ಅಭಿವೃದ್ದಿ ಕಾಮಗಾರಿ, ಪಾದಚಾರಿ ಭೂಗತ ಮಾರ್ಗ, ಎಮ್ಮೆಕೆರೆ ಬಳಿ ಅಂತರ್ ರಾಷ್ಟ್ರೀಯ ಈಜುಕೊಳ, ಮೋರ್ಗನ್‌ಗೇಟ್ ಸ್ಮಾರ್ಟ್ ರಸ್ತೆ ಪ್ಯಾಕೇಜ್-೬, ಕಂಕನಾಡಿ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ, ಕದ್ರಿ ಪಾರ್ಕ್ ರಸ್ತೆ ಅಭಿವೃದ್ದಿ ಹಾಗೂ ಎರಡು ಬದಿ ಉದ್ಯಾನವನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಸಚಿವರು ಪರಿಶೀಲಿಸಿದರು.







