ಎಸ್‌ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಯುವಕರಿಂದ ಪೊಲೀಸರಿಗೆ ನಿಂದನೆ ಆರೋಪ: ಪ್ರಕರಣ ದಾಖಲು
ಮಂಗಳೂರು : ನಗರ ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಶುಕ್ರವಾರ ನಡೆದ ಎಸ್‌ಡಿಪಿಐ ಪಕ್ಷದ ಜನಾಧಿಕಾರ ಸಮಾವೇಶಕ್ಕೆ ದ್ವಿಚಕ್ರ ಮತ್ತು ಕಾರಿನಲ್ಲಿ ತೆರಳುತ್ತಿದ್ದ ಕೆಲವು ಯುವಕರು ಕರ್ತವ್ಯ ನಿರತ ಪೊಲೀಸರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಾಯ್ದೆ ೧೪೩, ೩೫೩, ೫೦೪,೧೪೯ರಡಿ ಪ್ರಕರಣ ದಾಖಲಿಸಲಾಗಿದೆ.
ಮೇ ೨೭ರ ಸಂಜೆ ೩:೫೪ರಿಂದ ೩:೫೫ರ ಮಧ್ಯೆ ಪಡೀಲ್‌ನಿಂದ ತೆರಳುತ್ತಿದ್ದ ಬೈಕ್ ಮತ್ತು ಸ್ಕೂಟರ್ ಸವಾರರು ಹಾಗೂ ಹಿಂಬದಿ ಸವಾರರು ಹಾಗೂ ಕಾರು ಚಾಲಕ ಮತ್ತಿತರರು ಕಣ್ಣೂರು ಸಮೀಪದ ಕೊಡೆಕ್ಕಲ್ ಚೆಕ್ ಪೊಸ್ಟ್ ಬಳಿ ಪೊಲೀಸರನ್ನು ನಿಂದಿಸಿದ್ದಾರೆ ಎಂದು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಸೈ ಚಂದ್ರಶೇಖರ ಬಿ. ಶನಿವಾರ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೇ ೨೭ರಂದು ಕಣ್ಣೂರು ಗ್ರಾಮದ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ಎಸ್‌ಡಿಪಿಐ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ಬಂದೋಬಸ್ತ್‌ಗಾಗಿ ಕಣ್ಣೂರು ಸಮೀಪದ ಕೊಡೆಕ್ಕಲ್ ಬ್ಯಾರಿಕೇಡ್ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಗಳಾದ ಪುಟ್ಟರಾಮ, ರವಿಕುಮಾರ್, ಜಗದೀಶ್ ಮೆಟಗುಡ್ಡ, ಸಂಗನ ಗೌಡ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪಡೀಲ್ ಕಡೆಯಿಂದ ಬಂದ ಬೈಕ್, ದ್ವಿಚಕ್ರ ಸವಾರರು ಮತ್ತು ಕಾರಿನ ಚಾಲಕ ಮತ್ತಿತರರು ಬ್ಯಾರಿ ಭಾಷೆಯಲ್ಲಿ ನಿಂದಿಸುತ್ತಾ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಬಂದು ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಸಂಗನಗೌಡರ ಮೈಮೇಲೆ ಹಾಯಿಸುವಂತೆ ಬಂದಿದ್ದಾರೆ. ತಕ್ಷಣ ಅವರು ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಪೊಲೀಸರ ಕರ್ತವ್ಯ ಅಡ್ಡಿಪಡಿಸಿದ್ದಲ್ಲದೆ ನಿಂದಿಸಿ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ಚಂದ್ರಶೇಖರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.