ಮಡಿಕೇರಿ: ಕೋಟೆ ಅಬ್ಬಿ ಜಲಪಾತದಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು

ಮಡಿಕೇರಿ: ಕೊಡಗಿಗೆ ಪ್ರವಾಸಕ್ಕೆಂದು ಬಂದಿದ್ದ ಹೈದರಾಬಾದ್ ಮೂಲದ ಮೂವರು ನೀರುಪಾಲಾದ ಘಟನೆ ಮುಕ್ಕೋಡ್ಲು ಸಮೀಪದ ಕೋಟೆ ಅಬ್ಬಿಯಲ್ಲಿ ನಡೆದಿದೆ.
ಶ್ಯಾಮ(36), ಶ್ರೀಹರ್ಷ(18) ಹಾಗೂ ಶಾಹೀಂದ್ರ(16) ಎಂಬುವವರೇ ಮೃತಪಟ್ಟವರು. ಹೈದರಾಬಾದ್ ಮೂಲದ 13 ಮಂದಿ ಪ್ರವಾಸಿಗರು ಶನಿವಾರ ಕೊಡಗಿಗೆ ಪ್ರವಾಸಕ್ಕೆಂದು ಬಂದು ಕುಶಾಲನಗರದ ಹೋಂ ಸ್ಟೇಯೊಂದರಲ್ಲಿ ತಂಗಿದ್ದರು. ರವಿವಾರ ಮಡಿಕೇರಿ ತಾಲ್ಲೂಕಿನ ಮಾಂದಲ್‍ಪಟ್ಟಿಗೆ ತೆರಳಿದ್ದ ಈ ಪ್ರವಾಸಿಗರ ತಂಡ, ಬಳಿಕ ಮುಕ್ಕೋಡ್ಲು ಬಳಿಯ ಕೋಟೆ ಅಬ್ಬಿ ನೋಡಲು ತೆರಳಿದ್ದರು. ಈ ವೇಳೆ ಕೆಲವರು ಅಲ್ಲಿನ ಜಲಪಾತದ ಕಲ್ಲುಗಳ ಮೇಲೆ ಕುಳಿತು ಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭ ಓರ್ವ ಕಾಲುಜಾರಿ ನೀರಿಗೆ ಬಿದ್ದಿದ್ದು, ರಕ್ಷಣೆಗಾಗಿ ಕೂಗಿದ್ದಾನೆ. ಆತನನ್ನು ರಕ್ಷಿಸಲು ಮತ್ತಿಬ್ಬರು ನೀರಿಗಿಳಿದಾಗ ಅವರು ಕೂಡು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಮೂವರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.





