ಬಲಪಂಥೀಯ ಯೆಹೂದ್ಯರಿಂದ ಅಲ್ಅಕ್ಸಾ ಮಸೀದಿ ಆವರಣಕ್ಕೆ ಅಕ್ರಮ ಪ್ರವೇಶ
![ಬಲಪಂಥೀಯ ಯೆಹೂದ್ಯರಿಂದ ಅಲ್ಅಕ್ಸಾ ಮಸೀದಿ ಆವರಣಕ್ಕೆ ಅಕ್ರಮ ಪ್ರವೇಶ ಬಲಪಂಥೀಯ ಯೆಹೂದ್ಯರಿಂದ ಅಲ್ಅಕ್ಸಾ ಮಸೀದಿ ಆವರಣಕ್ಕೆ ಅಕ್ರಮ ಪ್ರವೇಶ](https://www.varthabharati.in/sites/default/files/images/articles/2022/05/29/336968-1653846372.jpeg)
ಜೆರುಸಲೇಂ,ಮೇ 29: ಇಸ್ರೇಲಿಯರು ಹಾಗೂ ಫೆಲೆಸ್ತೀನಿಯರ ನಡುಎ ಸಂಘರ್ಷ ಕಿಡಿ ಹೊತ್ತಿಕೊಳ್ಳಲು ಕಾರಣವಾಗಬಹುದಾದ ಇಸ್ರೇಲಿ ಬಲಪಂಥೀಯರು ಹಮ್ಮಿಕೊಂಡಿರುವ ಪ್ರಚೋದನಕಾರಿ ಧ್ವಜಮೆರವಣಿಗೆ ನಡೆಯುವುದಕ್ಕೆ ಮುನ್ನವೇ ಜೆರುಸಲೇಂನ ಇತಿಹಾಸ ಪ್ರಸಿದ್ಧ ಅಲ್ ಅಕ್ಸಾ ಮಸೀದಿಯ ಆವರಣವನ್ನು ರವಿವಾರ ನೂರಾರು ಕಟ್ಟರ್ ಪಂಥೀಯ ಯೆಹೂದಿಗಳು ಅಕ್ರಮವಾಗಿ ಪ್ರವೇಶಿಸಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಇಸ್ರೇಲ್‌ನ ತೀವ್ರವಾದಿ ಪ್ರತಿಪಕ್ಷವಾದ ಕ್ನೆೆಸ್ಸೆಟ್‌ನ ನಾಯಕ ಇತಾಮರ್ ಬೆನ್‌ಗ್ವಿರ್ ತನ್ನ ಹಲವು ಬೆಂಬಲಿಗರೊಂದಿಗೆ ಮಸೀದಿಯ ಆವರಣವನ್ನು ಪ್ರವೇಶಿಸಿರುವುದಾಗಿ ಅಲ್ಜಝೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.ಮಸೀದಿಯ ಅಲ್ ಕ್ವಿಬ್ಲಿ ಪ್ರಾರ್ಥನಾ ಮಂದಿರದ ಪ್ರದೇಶವನ್ನ್ನು ಇಸ್ರೇಲಿ ಪಡೆಗಳು ಆಕ್ರಮಿಸಿಕೊಂಡಿದ್ದು, ಪ್ರಾರ್ಥನೆ ಸಲ್ಲಿಸಲು ಬಂದಿದ್ದವರನ್ನು ಅಲ್ಲಿಯೇ ಕೆಲವು ತಾಸುಗಳ ಕಾಲ ದಿಗ್ಭಂದನದಲ್ಲಿರಿಸಿದ್ದು, ಯೆಹೂದಿ ಬಲಪಂಥೀಯರು ನಿರಾತಂಕವಾಗಿ ಅಡ್ಡಾಡುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದೇ ವೇಳೆ ಅಲ್ ಅಕ್ಸಾ ಮಸೀದಿಯನ್ನು ಪ್ರವೇಶಿಸಲು ಯತ್ನಿಸಿದ ಫೆಲೆಸ್ತೀನಿ ಪತ್ರಕರ್ತರನ್ನು ಹಾಗೂ ಛಾಯಾಗ್ರಾಹಕರನ್ನು ಇಸ್ರೇಲಿ ಸೈನಿಕರು ತಡೆದರು ಹಾಗೂ ಅವರನ್ನು ಬಂಧಿಸುವುದಾಗಿ ಬೆದರಿಕೆಯೊಡ್ಡಿದ್ದಾರೆಂದು ಅಲ್ಜಝೀರಾ ಪತ್ರಕರ್ತೆ ನಜ್ವಾನ್ ಸಿಮ್ರಿ ತಿಳಿಸಿದ್ದಾರೆ.
ಆವರಣದಲ್ಲಿ ಜಮಾಯಿಸಿದ್ದ ಫೆಲೆಸ್ತೀನ್ ಪ್ರತಿಭಟನಕಾರರನ್ನು ಚದುರಿಸಲು ಇಸ್ರೇಲಿ ಪಡೆಗಳು ರಬ್ಬರ್ ಬುಲೆಟ್ಗಳನ್ನು ಎಸೆದಿದ್ದಾರೆಂದು ಅವರು ಹೇಳಿದ್ದಾರೆ. ಈ ಮಧ್ಯೆ ಇಸ್ರೇಲ್ ಆಕ್ರಮಿತ ಪೂರ್ವ ಜೆರುಸಲೇಂನ ಹಳೆ ನಗರದಿಂದ ಕನಿಷ್ಠ 18 ಮಂದಿ ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಇಸ್ರೇಲಿ ಪೊಲೀಸರು ತಿಳಿಸಿದ್ದಾರೆ.ಹಳೆ ಜೆರುಸಲೇಂನ ಅಲ್ವಾದ್ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಗಾಯಗೊಂಡ ಫೆಲೆಸ್ತೀನ್ ನಾಗರಿಕನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಗಮಿಸಿದ ಆ್ಯಂಬುಲೆನ್ಸ್ ಸಿಬ್ಬಂದಿಯ ಮೇಲೂ ಇಸ್ರೇಲಿ ವಸಾಹತುದಾರರು ದಾಳಿ ನಡೆಸಿದ್ದಾರೆಂದು ಫೆಲೆಸ್ತೀನ್‌ನ ರೆಡ್ ಕ್ರಿಸೆಂಟ್ ಸೊಸೈಟಿ ತಿಳಿಸಿದೆ
ಬಲಪಂಥೀಯ ಯೆಹೂದಿಗಳು ಅಕ್ರಮವಾಗಿ ಅಲ್ ಅಕ್ಸಾ ಮಸೀದಿಯನ್ನು ಪ್ರವೇಶಿಸಲು ಯತ್ನಿಸಿರುವುದು ಫೆಲೆಸ್ತೀನ್‌ನಲ್ಲಿ ಉದ್ವಿಗ್ನತೆ ಕಾರಣವಾಗಿದೆ. ಇಸ್ರೇಲಿ ಕಾನೂನಿನ ಪ್ರಕಾರ ಅಲ್ ಅಕ್ಸಾ ಮಸೀದಿಯ ಆವರಣದಲ್ಲಿ ಯೆಹೂದಿಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿಲ್ಲ .ಅಲ್ಲದೆ ಇಸ್ರೇಲ್‌ನ ಮುಖ್ಯ ಯೆಹೂದ್ಯ ಧರ್ಮಗುರು ಕೂಡಾ ಅದನ್ನು ನಿಷೇಧಿಸಿದ್ದಾರೆ. ಆದಾಗ್ಯೂ ಕೆಲವು ಬಲಪಂಥೀಯ ಇಸ್ರೇಲಿಗಳು ಅಲ್ ಅಕ್ಸಾ ಮಸೀದಿಯಲ್ಲಿ ತಮಗೆ ಪ್ರಾರ್ಥನೆಯ ಅವಕಾಶ ನೀಡಬೇಕೆಂದು ವಾದಿಸುತ್ತಿದ್ದಾರೆ.