ಪುತಿನ್ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ: ದಿ ಮಿರರ್ ವರದಿ
PHOTO:AP
ಮಾಸ್ಕೊ,ಮೇ 29: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆಯೆಂದು ರಶ್ಯದ ಬೇಹುಗಾರಿಕಾ ಸಂಸ್ಥೆ ಎಫ್ಎಸ್ಬಿಯ ಹೇಳಿಕೆಯೊಂದನ್ನು ಉಲ್ಲೇಖಿಸಿ ಬ್ರಿಟನ್ನ ‘ದಿ ಮಿರರ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪುತಿನ್ ಅವರ ಆರೋಗ್ಯ ಎಷ್ಟರ ಮಟ್ಟಿಗೆ ಹದಗೆಟ್ಟಿದೆಯೆಂದರೆ ಅವರು ಮೂರು ವರ್ಷ ಮಾತ್ರವೇ ಬದುಕಬಹುದೆಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಂದಾಜಿಸಿದ್ದಾರೆಂದು ಮಿರರ್ ವರದಿ ತಿಳಿಸಿದೆ.69 ವರ್ಷದ ಪುತಿನ್ ಅವರ ತ್ವರಿತವಾಗಿ ಉಲ್ಬಣಿಸುವಂತಹ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆಂದು ಎಫ್ಎಸ್ಬಿಯ ಅಧಿಕಾರಿ ಹೇಳಿದ್ದಾರೆಂದು ವರದಿ ತಿಳಿಸಿದೆ. ಪುತಿನ್ ಆವರ ಕಣ್ಣ ದೃಷ್ಟಿಯೂ ಅತ್ಯಂತ ಕಳವಳಕಾರಿಯಾದ ರೀತಿಯಲ್ಲಿ ಕೆಟ್ಟುಹೋಗುತ್ತಿದೆ ಹಾಗೂ ಅವರ ಕೈಕಾಲುಗಳು ಅನಿಯಂತ್ರಿತವಾಗಿ ಕಂಪಿಸುತ್ತಿವೆ ಎಂದು ಅದು ಹೇಳಿದೆ.ಈ ಹಿಂದೆ ಎಫ್ಎಸ್ಬಿ ಬೇಹುಗಾರಿಕೆಯ ಸಂಸ್ಥೆಯ ಅಧಿಕಾರಿಯಾಗಿದ್ದು, ಇದೀಗ ದೇಶ ತ್ಯಜಿಸಿ ಬ್ರಿಟನ್ನ ಆಶ್ರಯ ಪಡೆದಿರುವ ಬೋರಿಸ್ ಕಾರ್ಪಿಚಿಕೊವ್ ಅವರಿಗೆ ರಶ್ಯದ ಬೇಹುಗಾರನೊಬ್ಬನಿಂದ ದೊರೆತ ರಹಸ್ಯ ಸಂದೇಶವನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಿರುವುದಾಗಿ ದಿ ಮಿರರ್ ತಿಳಿಸಿದೆ.
ತಂಪುಕನ್ನಡಕ ಧರಿಸುವಂತೆ ವೈದ್ಯರು ಸಲಹೆ ಮಾಡಿದ್ದರಾದರೂ, ಅದು ತನ್ನ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡುವುದೆಂಬ ಭೀತಿಯಿಂದ ಅವರದನ್ನು ಧರಿಸಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.ಪುತಿನ್ ಅವರು ಈ ತಿಂಗಳು ಯಶಸ್ವಿಯಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆಂದು ಈ ಮೊದಲು ವರದಿಯಾಗಿತ್ತು.