ಬಿಕರ್ನಕಟ್ಟೆ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್: ಸವಾರರಿಬ್ಬರು ಗಂಭೀರ
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು, ಮೇ 30: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಿಕರ್ನಕಟ್ಟೆಯ ಮಸೂದ್ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಎದುರುಗಡೆಯ ಉಸ್ಮಾನಿಯಾ ಕಾಂಪ್ಲೆಕ್ಸ್ ಬಳಿ ರವಿವಾರ ಬೆಳಗ್ಗಿನ ಜಾವ ನಡೆದಿದೆ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅತೀವೇಗದಲ್ಲಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಸವಾರರಿಬ್ಬರು ಬೈಕಿನಿಂದ ಡಿವೈಡರ್ ಗೆ ಎಸೆಲಯಲ್ಪಟ್ಟಿರುವುದು ಕಂಡುಬರುತ್ತಿದೆ.
ಗಾಯಾಳುಗಳನ್ನು ಗಣೇಶ್ ಮತ್ತು ಧೀರಜ್ ಎಂದು ಗುರುತಿಸಲಾಗಿದೆ. ಗಣೇಶ್ ಶನಿವಾರ ರಾತ್ರಿ ತನ್ನ ಸ್ನೇಹಿತ ಧೀರಜ್ ರನ್ನು ಅವರ ಮನೆಗೆ ಬಿಟ್ಟು ಬರಲೆಂದು ತನ್ನ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡು ಡಿವೈಡರ್ ನಲ್ಲಿ ಬಿದ್ದಿದ್ದ ಇವರಿಬ್ಬರನ್ನು ಆ ದಾರಿಯಲ್ಲಿ ಆಟೋ ರಿಕ್ಷಾ ಬಾಡಿಗೆಗೆ ತೆರಳುತ್ತಿದ್ದ ಪ್ರವೀಣ್ ಕುಮಾರ್ ಎಂಬವರು ಗಮನಿಸಿ ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಭೀರಾವಸ್ಥೆಯಲ್ಲಿರುವ ಗಣೇಶ್ ಮತ್ತು ಧೀರಜ್ ನಗರದ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.