ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಯಾತ್ರಾರ್ಥಿಗಳ ನಡುವೆ ಅಡಗಿದ್ದ ಶಂಕಿತ ಹಂತಕ ಡೆಹ್ರಾಡೂನ್ನಲ್ಲಿ ಪೊಲೀಸ್ ವಶಕ್ಕೆ

ಸಿಧು ಮೂಸೆವಾಲಾ( PTI)
ಹೊಸದಿಲ್ಲಿ: ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿಯನ್ನು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಹೇಮಕುಂಡ್ ಸಾಹಿಬ್ ಯಾತ್ರಾಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ನಡುವೆ ಆರೋಪಿ ಇದ್ದನೆನ್ನಲಾಗಿದ್ದು ಆತನನ್ನು ಪಂಜಾಬ್ ಮತ್ತು ಉತ್ತರಾಖಂಡದ ಜಂಟಿ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡಿದೆ. ಆತನನ್ನು ಪೊಲೀಸರು ಈಗ ಪಂಜಾಬ್ಗೆ ಕರೆದೊಯ್ಯುತ್ತಿದ್ದಾರೆ.
ಇಂದು ವಶಪಡಿಸಿಕೊಳ್ಳಲಾದ ಶಂಕಿತ ಹಂತಕ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ಸೇರಿದವನೆನ್ನಲಾಗಿದೆ. ಈ ಗ್ಯಾಂಗ್ ಈಗಾಗಲೇ ಈ ಹತ್ಯೆಗೆ ತಾನು ಜವಾಬ್ದಾರಿ ಎಂದು ಹೇಳಿಕೊಂಡಿದೆ ಎಂದು ವರದಿಯಾಗಿದೆ.
ಇನ್ನೂ ಐದು ಮಂದಿ ಶಂಕಿತರನ್ನು ವಶಪಡಿಸಿಕೊಳ್ಳಲಾಗಿದ್ದು ಅವರೆಲ್ಲರನ್ನೂ ಪಂಜಾಬ್ಗೆ ಕರೆದೊಯ್ಯಲಾಗುತ್ತಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಸಿಧು ಮೂಸೆವಾಲಾ ಅವರನ್ನು ಪಂಜಾಬ್ನ ಮನ್ಸಾದಲ್ಲಿ ರವಿವಾರ ಹತ್ಯೆಗೈಯ್ಯಲಾಗಿತ್ತು.
ಗ್ಯಾಂಗ್ಗಳ ನಡುವಿನ ದ್ವೇಷವೇ ಈ ಹತ್ಯೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರ.
ಗಾಯಕನ ಮ್ಯಾನೇಜರ್ ಶಗುನ್ಪ್ರೀತ್ ಹೆಸರು ಕಳೆದ ವರ್ಷ ಯುವ ಅಕಾಲಿ ನಾಯಕ ವಿಕ್ಕಿ ಮಿದ್ದುಖೇರ ಕೊಲೆ ಪ್ರಕರಣದಲ್ಲಿ ಕೇಳಿ ಬಂದಿತ್ತು. ಘಟನೆಯ ನಂತರ ಶಗುನ್ಪ್ರೀತ್ ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದ.
ಈ ಹತ್ಯೆಗೆ ಪ್ರತೀಕಾರವಾಗಿ ಸಿಧು ಮೂಸೆವಾಲಾ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.