ಮಂಗಳೂರು: ಟಿಆರ್‌ಎಫ್-ಎಂಇಐಎಫ್ ವತಿಯಿಂದ ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿ ವೇತನ ಜಾಗೃತಿ ಶಿಬಿರ

ಮಂಗಳೂರು: ಎಂಇಐಎಫ್ ದ.ಕ ಮತ್ತು ಉಡುಪಿ ಜಿಲ್ಲೆ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಶಿಬಿರ (Career Guidance Programme), ವಿದ್ಯಾರ್ಥಿ ವೇತನ ಜಾಗೃತಿ ಶಿಬಿರವು ನಗರದ ಪುರಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಮನ್ಸೂರ್ ಅಹ್ಮದ್ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮನುಷ್ಯ ತನ್ನಲ್ಲಿರುವ ಪ್ರತಿಭೆ ಮತ್ತು ತನಗೆ ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಉನ್ನತ ಸಾಧನೆ ಮಾಡಬಹುದು. ಅದಕ್ಕಾಗಿ ಸೂಕ್ತ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದು ಶುಭ ಹಾರೈಸಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡುತ್ತಾ, ಯಾರಲ್ಲೂ ಕೀಳರಿಮೆ ಬೇಕಾಗಿಲ್ಲ. ಪ್ರತಿಯೊಬ್ಬನಲ್ಲೂ ಸಾಧನೆ ಮಾಡುವ ಶಕ್ತಿ ಮತ್ತು ಸಂಪತ್ತು ಇದೆ. ಅದನ್ನು ಅರಿತು ಕೊಳ್ಳಲು ಇಂತಹ ಜಾಗೃತಿ ಶಿಬಿರಗಳು ಸಹಕಾರಿಯಾಗುತ್ತವೆ. ಈ ಜಾಗೃತಿ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸ್ವಯಂ ಸ್ಫೂರ್ತಿ, ಮಾಹಿತಿಯನ್ನು ಪಡೆದುಕೊಳ್ಳಲು ಈ ರೀತಿಯ ಶಿಬಿರಗಳಿಗೆ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ "ಎಂಇಐಎಫ್" ಸಹಯೋಗದಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂಇಐಎಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ ಮಾತನಾಡುತ್ತಾ, ಈ ರೀತಿಯ ಜಾಗೃತಿ ಕಾರ್ಯಕ್ರಮದ ಪರಿಣಾಮವಾಗಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಬಾರಿಯ ಫಲಿತಾಂಶದಲ್ಲೂ ಉತ್ತಮ ಪ್ರಗತಿ ಕಂಡು ಬಂದಿದೆ. ಅದೇ ರೀತಿ ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಇತರ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಮತ್ತು ಫಲಿತಾಂಶ ದೊರೆಯುತ್ತಿರುವುದು ತೃಪ್ತಿ ನೀಡಿದೆ ಎಂದರು.
ಸಮಾರಂಭದಲ್ಲಿ ಉದ್ಯಮಿ ಮುಹಮ್ಮದ್ ಇಸ್ಹಾಕ್ ತುಂಬೆ, ಮುನೀರ್ ಮೊಹಿಯುದ್ದೀನ್, ಮುಹಮ್ಮದ್ ಮುಸ್ತಾಫ ಅಡ್ಡೂರು, ಪುಷ್ಪರಾಜ್ ಬಿ.ಎನ್ ಶುಭ ಹಾರೈಸಿದರು.
ಕೆರಿಯರ್ ಗೈಡೆನ್ಸ್ ಸಿಗ್ಮಾ ಫೌಂಡೇಶನ್ ಸಂಸ್ಥಾಪಕರು ಮುಖ್ಯ ತರಬೇತುದಾರರಾದ ಅಮೀನ್ ಮುದಸ್ಸರ್ ಬೆಂಗಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಮತ್ತು "ಎಂಇಐಎಫ್" ಕಾರ್ಯಕ್ರಮಗಳ ವಿಭಾಗದ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ ಸ್ವಾಗತಿಸಿದರು. "ಎಂಇಐಎಫ್" ಕಾರ್ಯಕ್ರಮದ ಸಂಚಾಲಕ ನಿಸಾರ್ ಮುಹಮ್ಮದ್ ತರಬೇತುದಾರರನ್ನು ಸಭೆಗೆ ಪರಿಚಯಿಸಿದರು. ಟಿಆರ್‌ಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ನಕಾಶ್ ಬಾಂಬಿಲ ವಂದಿಸಿದರು.
ಕಾರ್ಯಕ್ರಮದಲ್ಲಿ 45 ವಿದ್ಯಾಸಂಸ್ಥೆಗಳಿಂದ 900ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.