ದೇಶ ನಿಮ್ಮೊಂದಿಗಿದೆ, ಧೈರ್ಯದಿಂದಿರಿ: ಪ್ರಧಾನಿ ನರೇಂದ್ರ ಮೋದಿ
ಕೋವಿಡ್ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳೊಂದಿಗೆ ಸಂವಾದ

ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೊ-PTI)
ಮಂಗಳೂರು : ಹೆತ್ತವರ ಪ್ರೀತಿ, ಕಾಳಜಿಯನ್ನು ಯಾರೂ ನೀಡಲು ಸಾಧ್ಯವಿಲ್ಲ. ಆದರೂ ದೇಶ ನಿಮ್ಮೊಂದಿಗಿದೆ. ಪಿಎಂ ಕೇರ್ಸ್ ಯೋಜನೆ ಮೂಲಕ ಕೇಂದ್ರ ಸರಕಾರ ನಿಮ್ಮೆಲ್ಲರ ಹಿತಾಸಕ್ತಿ ಕಾಯಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೋವಿಡ್-೧೯ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳೊಂದಿಗೆ ಸೋಮವಾರ ಹೊಸದಿಲ್ಲಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿ ಅವರು ಮಾತನಾಡಿದರು.
ನಗರದ ಕೊಟ್ಟಾರದಲ್ಲಿರುವ ಜಿಪಂನ ಎನ್ಐಡಿ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾದ ಸಂವಾದದಲ್ಲಿ ಜಿಲ್ಲೆಯ 11 ಮಕ್ಕಳು ಭಾಗವಹಿಸಿದ್ದರು.
ಈಗಾಗಲೆ ಮಕ್ಕಳ ಮನೆ ಹತ್ತಿರವಿರುವ ಸರಕಾರಿ ಅಥವಾ ಖಾಸಗಿ ಶಾಲೆಗೆ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಬೇಕಾದ ಪುಸ್ತಕ, ಬಟ್ಟೆ ಇನ್ನಿತರ ವೆಚ್ಚವನ್ನು ಕೂಡ ಸರಕಾರ ಭರಿಸಲಿದೆ. ಉನ್ನತ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಾಲಕ್ಕೂ ಪಿ.ಎಂ.ಕೇರ್ಸ್ ನೆರವಾಗಲಿದೆ. 5 ಲಕ್ಷ ರೂ.ವರೆಗಿನ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಮಕ್ಕಳ ಹೆಸರಿನಲ್ಲಿ ಅಂಚೆ ಬ್ಯಾಂಕ್ನಲ್ಲಿಡಲಾಗುವ ಇಡಗಂಟಿನಲ್ಲಿ ಲಭ್ಯವಾಗುವ ಬಡ್ಡಿಯನ್ನು 18ರಿಂದ 23 ವಯಸ್ಸಿನ ಅವಧಿಯಲ್ಲಿ ಪ್ರತಿ ತಿಂಗಳ ಸ್ಟೇಫಂಡ್ ರೂಪದಲ್ಲಿ ಖರ್ಚಿಗೆ ಹಣ ನೀಡಲಾಗುವುದು. 23 ವರ್ಷದ ನಂತರ ಮುಂದಿನ ಭವಿಷ್ಯಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇದಲ್ಲದೆ ಸ್ಪಾನ್ಶರಶಿಪ್ ಯೋಜನೆಯಡಿ ಮಾಸಿಕ 2000 ರೂ.ವನ್ನು ನೀಡಲಾಗುವುದು. ೧೮ ವರ್ಷದೊಳಗಿನ ಮಕ್ಕಳಿಗೆ ಗರಿಷ್ಠ ೩ ವರ್ಷ ಅಥವಾ ೧೮ ವರ್ಷದವರೆಗೆ (ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ) ಈ ಸೌಲಭ್ಯ ಸಿಗಲಿದೆ ಎಂದು ಪ್ರಧಾನಿ ವಿವರಿಸಿದರು.
ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ೧-೧೨ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡಿಜಿಟಲ್ ಮೋಡ್ ಮೂಲಕ ಸ್ಕಾಲರ್ಶಿಪ್ ಹಣ ವರ್ಗಾವಣೆಗೊಳಿಸಿದರು.
ಜಿಲ್ಲಾಧಿಕಾರಿಗಳಿಂದ ಕಿಟ್ ವಿತರಣೆ
ಕೋವಿಡ್ನಿಂದ ತಂದೆ-ತಾಯಿಗಳನ್ನು ಕಳೆದಕೊಂಡ ಜಿಲ್ಲೆಯ 11 ಮಕ್ಕಳಿಗೆ ವಿಡಿಯೋ ಸಂವಾದದ ಮುಕ್ತಾಯವಾದ ಬಳಿಕ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ೧೦ ಲಕ್ಷ ರೂ.ಗಳ ಅಂಚೆ ಇಲಾಖೆ ಪಾಸ್ಬುಕ್, ಮಕ್ಕಳಿಗೆ ಪ್ರಧಾನ ಮಂತ್ರಿಗಳು ಬರೆದ ಸ್ನೇಹ ಪತ್ರ, ಆಯುಷ್ಮಾನ್ ಆರೋಗ್ಯ ಕಾರ್ಡ್ ಒಳಗೊಂಡ ಕಿಟ್ ವಿತರಿಸಿ ಶುಭ ಹಾರೈಸಿದರು. ಅಲ್ಲದೆ ಈ ಮಕ್ಕಳಿಗೆ ಪ್ರವಾಸವೊಂದನ್ನು ಆಯೋಜಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸೂಚಿಸಿದರು.
ಈ ಮಕ್ಕಳಿಗೆ ೧೮ ವರ್ಷ ತುಂಬುವವರಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಮಕ್ಕಳ ಜಂಟಿ ಖಾತೆಯಲ್ಲಿ ೧೦ ಲಕ್ಷ ರೂ. ಇರುತ್ತದೆ. ೧೮ ವರ್ಷ ಪೂರೈಸಿದ ನಂತರ ಆ ಮಕ್ಕಳ ಸ್ವಂತ ಖಾತೆಗೆ ಹಣ ವರ್ಗಾವಣೆ ಯಾಗುತ್ತದೆ. ಆ ಮಕ್ಕಳು ೨೩ನೇ ವರ್ಷಕ್ಕೆ ಹಣವನ್ನು ಬಳಸಬಹುದಾಗಿದೆ. ೧೮ ರಿಂದ ೨೩ ವರ್ಷದವರೆಗೆ ಠೇವಣಿ ಇರಿಸಿದ ಹಣಕ್ಕೆ ಆ ಮಕ್ಕಳಿಗೆ ಬಡ್ಡಿ ಹಣ ಸಂದಾಯವಾಗಲಿದೆ.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪಬೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯಮುನಾ, ಹಿರಿಯ ಅಂಚೆ ನಿರೀಕ್ಷಕ ಹರ್ಷ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಬಾಲನ್ಯಾಯ ಮಂಡಳಿಯ ಸದಸ್ಯೆ ಐಡಾ ಡಿಸೋಜ, ಯುನಿಸೆಫ್ ಸದಸ್ಯ ದುಲ್ಸಿನ್ ಮತ್ತಿತರರಿದ್ದರು.