ಮಹಿಳೆಯರಿಗೆ ಕನಿಕರ ಬೇಕಿಲ್ಲ, ಶಕ್ತಿ-ಬೆಲೆ-ಗೌರವ ಕೊಡಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು, ಮೇ 30: ಮಹಿಳೆಯ ಬಗ್ಗೆ ಕನಿಕರ ಬೇಕಿಲ್ಲ, ಬದಲಾಗಿ ಅವರ ದ್ವನಿಗೆ ಶಕ್ತಿ, ಬೆಲೆ ಗೌರವ ಸಿಗುವಂತಾಗಬೇಕು ಎಂದು ಕೇಂದ್ರ ಸರಕಾರದ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ಸಚಿವೆ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯಪಟ್ಟರು.
ನಗರದ ಬಿಲ್ಲವ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸಿಗಬೇಕು. ಒಂಟಿಯಾಗಿ ಮಹಿಳೆಯರು ಬದುಕಲು ಮತ್ತು ನಿರ್ಧಾರವನ್ನು ತೆಗೆದುಕೊಳ್ಳುಲು ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಬೇಕು. ಹಾಗೆಯೇ ಮಹಿಳೆಯರು ತಮ್ಮ ಮಕ್ಕಳನ್ನು ಗಂಡು-ಹೆಣ್ಣು ಭೇದ ತೋರದೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಲಿಂಗ ಅಸಮಾನತೆಯನ್ನು ತೊಲಗಿಸಲು ನೆರವಾಗಬೇಕು ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಎಂ. ವೇದಕುಮಾರ್ ಮಾತನಾಡಿ, ಮಹಿಳೆಯರು ಮಕ್ಕಳನ್ನು ಓದಿಸಲು ಹೇಗೆ ಶ್ರಮ ವಹಿಸುತ್ತಾರೋ, ಹಾಗೆಯೇ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬನ್ನೇರುಘಟ್ಟ ರಸ್ತೆಯ ಜೆಡಿ ಮರ ಜಂಕ್ಷನ್‍ಗೆ ಬ್ರಹ್ಮಶ್ರೀ ನಾರಾಯಣಗುರು ಜಂಕ್ಷನ್ ಎಂದು ನಾಮಕರಣವಾಗಿದ್ದು, ಮುಂದೆ ಮೆಟ್ರೋ ಜಂಕ್ಷನ್‍ಗೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಇಟ್ಟು ನಾಮಕರಣ ಮಾಡಬೇಕು ಎಂದು ಬಿಲ್ಲವ ಸಂಘದ ವತಿಯಿಂದ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.