ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣ: ನಾಲ್ವರ ಬಂಧನ

ಕುಂದಾಪುರ : ತಲ್ಲೂರು ಗ್ರಾಪಂ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕುಂದಾಪುರ ಡಿವೈಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ಪೊಲೀಸರ ತಂಡ ಬಂಧಿಸಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಡಿಯಲ್ಲಿ ಅಝೀಝ್(32) ಹಾಗೂ ಆತನಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಸಹೋದರರಾದ ರಹೀಮ್ (34), ಅಬ್ದುಲ್ ಖಾದರ್(45) ಕಾಸರಗೋಡಿನ ರಶೀದ್(25) ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಲಯವು ಪ್ರಕರಣದ ಪ್ರಮುಖ ಆರೋಪಿ ಅಝೀಝ್ಗೆ ಜೂ.6ರ ವರೆಗೆ ಪೊಲೀಸ್ ಕಸ್ಟಡಿ ಹಾಗೂ ಉಳಿದ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ ಎಂದು ತಿಳಿದುಬಂದಿದೆ.
ತಲ್ಲೂರಿನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ, ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಆಕೆ ಮೃತಪಟ್ಟಿದ್ದಳು. ಆಕೆಯ ಆತ್ಮಹತ್ಯೆಗೆ ಅಝೀಝ್ ಹಾಗೂ ಆತನ ಪತ್ನಿ ಕಾರಣ ಎಂದು ಮೃತರ ಸಹೋದರ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.