ಹಿಜಾಬ್ ವಿಚಾರ; ಯು.ಟಿ. ಖಾದರ್ ವಿರುದ್ಧ ಆರೋಪ ಸರಿಯಲ್ಲ: ಶಾಹುಲ್ ಹಮೀದ್

ಯು.ಟಿ. ಖಾದರ್
ಮಂಗಳೂರು, ಮೇ 30: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿಯ ಘಟಕ ಕಾಲೇಜಿನ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ವಿರುದ್ಧ ಮಾಡಿರುವ ಆರೋಪ ಸರಿಯಲ್ಲ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿದ್ಯಾರ್ಥಿನಿ ಗೌಸಿಯಾ ವಾಸ್ತವ ಸ್ಥಿತಿಯನ್ನು ಮರೆ ಮಾಚಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ತಿಳಿಸಿದ್ದಾರೆ.
ಇದೇ ವಿದ್ಯಾರ್ಥಿಗಳು ಖಾದರ್ ಅವರನ್ನು ಸಂಪರ್ಕಿಸಿದಾಗ ಅವರು ಸ್ಪಂದಿಸಿದ್ದಾರೆ. ಖಾದರ್ ಸೂಚನೆಯ ಮೇರೆಗೆ ಖುದ್ದು ತಾನೇ ವಿದ್ಯಾರ್ಥಿನಿಯರನ್ನು ಜಿಲ್ಲಾಧಿಕಾರಿಗೆ ಭೇಟಿ ಮಾಡಿಸಿದ್ದೆ. ಹಿಜಾಬ್ ವಿಚಾರ ಹಾಗೂ ವಿದ್ಯಾರ್ಥಿನಿಯರು ಎದುರಿಸುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಜಿಲ್ಲಾಧಿಕಾರಿ ಕೂಡ ಸಕಾರಾತ್ಮಕ ವಾಗಿ ಸ್ಪಂದಿಸಿದ್ದರು. ಶಾಸಕ ಖಾದರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅವರು ದ.ಕ.ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದರು. ಇಷ್ಟೆಲ್ಲಾ ಆದರೂ ಕೂಡ ವಿದ್ಯಾರ್ಥಿನಿಯರು ಖಾದರ್ ಸಹಿತ ಯಾರೂ ಸಮಸ್ಯೆಗೆ ಸ್ಪಂದಿಸಿಲ್ಲ ಎಂದಿದ್ದು, ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಕೆ.ಕೆ.ಶಾಹುಲ್ ಹಮೀದ್ ತಿಳಿಸಿದ್ದಾರೆ.