ಯುನಿವೆಫ್ ಕುದ್ರೋಳಿ ವತಿಯಿಂದ ಎಸೆಸೆಲ್ಸಿ ಸಾಧಕರಿಗೆ ಸನ್ಮಾನ

ಮಂಗಳೂರು : ಯುನಿವೆಫ್ ಕರ್ನಾಟಕ ಎಜುಕೇಶನ್ ಫೋರಂ ಕುದ್ರೋಳಿ ಶಾಖೆ ವತಿಯಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ಕುದ್ರೋಳಿ ವ್ಯಾಪ್ತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸುವ ಕಾರ್ಯಕ್ರಮವು ಬದ್ರಿಯಾ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಮಾತನಾಡಿ "ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ದೇಶದ ಆಗುಹೋಗುಗಳ ಬಗ್ಗೆ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು, ಸಾಮಾಜಿಕ ಪರಿವರ್ತನೆಯ ಹರಿಕಾರರಾಗುವ ನಿಟ್ಟಿನಲ್ಲಿ ಶಿಕ್ಷಣ ನಮ್ಮನ್ನು ಬದಲಿಸಬೇಕು. ಪ್ರತಿಯೊಬ್ಬರೂ ಅಂಥ ಹೊಣೆಗಾರಿಕೆಯೊಂದಿಗೆ ರಂಗಕ್ಕಿಳಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ" ಎಂದು ಹೇಳಿದರು.
ಯುನಿವೆಫ್ ಎಜುಕೇಶನ್ ಫೋರಂ ಸಂಚಾಲಕ ಯು. ಕೆ. ಖಾಲಿದ್ ರವರು ಸರಕಾರ ಮತ್ತು ವಿವಿಧ ಸಂಸ್ಥೆಗಳ ವಿದ್ಯಾರ್ಥಿವೇತನ, ಸಾಧಕರಿಗೆ ನೀಡಲಾಗುವ ಪ್ರಶಸ್ತಿಗಳು ಹಾಗೂ ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬದ್ರಿಯಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ಇಕ್ಬಾಲ್ ಮತ್ತು ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರಳಾ ವರ್ಗೀಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು.
ಸಯೀದ್ ಅಹ್ಮದ್ ಕಿರಾಅತ್ ಪಠಿಸಿದರು. ಆಸಿಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ವಕಾಝ್ ಅರ್ಶಲನ್ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.