ಉನ್ನತ ಶಿಕ್ಷಣ ಅಭಿವೃದ್ಧಿಯಲ್ಲಿ ವಿದ್ಯಾರ್ಥಿ, ಶಿಕ್ಷಕ, ಸಂಸ್ಥೆಯ ಪಾತ್ರ ಮಹತ್ತರವಾದುದು: ಪ್ರೊ.ಕೆ.ಎಸ್.ರಂಗಪ್ಪ
ಮಂಗಳೂರು ವಿವಿ ವಿಶ್ರಾಂತ ಕುಲಪತಿಗಳ ಸಮ್ಮೇಳನ ಉದ್ಘಾಟನೆ

ಕೊಣಾಜೆ: ಶಿಕ್ಷಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಸ್ಥೆಗಳ ನಡುವಿನ ವಿಚಾರ ವಿನಿಮಯವಾಗಬೇಕು. ಉನ್ನತ ಶಿಕ್ಷಣದಲ್ಲಿ ಈ ಮೂರೂ ವಿಭಾಗಗಳಿಗೂ ಸಮಾನ ಜವಾಬ್ದಾರಿಯಿದೆ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಉಪಕುಲಪತಿಗಳ ವೇದಿಕೆ (ಎಫ್ವಿಸಿಕೆ) ಅಧ್ಯಕ್ಷ ಮತ್ತು ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ, ಎಫ್ವಿಸಿಕೆ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಆಡಳಿತದ ಸುಧಾರಣೆಗೆ ಕಾರ್ಯತಂತ್ರಗಳು’ ಎಂಬ ಒಂದು ದಿನದ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಹಳೆಯ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು. ಆಡಳಿತ ಮಂಡಳಿ (ಬಿಒಜಿ) ವಿಶ್ವವಿದ್ಯಾಲಯಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು, ರಾಜಕಾರಣಿಗಳಲ್ಲ, ಎಂದು ಅವರು ಹೇಳಿದರು.
ಮಾಹೆಯ ಮಾಜಿ ಉಪಕುಲಪತಿ ಡಾ.ವಿನೋದ್ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯೊಂದರ ಸುಧಾರಣೆಗೆ ನ್ಯಾಕ್ ಮಾನ್ಯತೆ ಕಡ್ಡಾಯಗೊಳಿಸಬೇಕಿದೆ.ಉನ್ನತ ಶಿಕ್ಷಣ ವಲಯದ ಗುಣಮಟ್ಟ ಸುಧಾರಣೆಗೆ ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರವೂ ಮಹತ್ತರವಾದುದು ಎಂದು ಹೇಳಿದರು.
ಶಿಕ್ಷಕರ ಪಾತ್ರ ಮಾರ್ಗದರ್ಶಕ, ಸಂಚಾಲಕನಂತಿರಬೇಕು. ತಂತ್ರಜ್ಞಾನ ತರಗತಿ ಬೋಧನೆಗೆ ಪರ್ಯಾಯವಲ್ಲ. ಆದರೆ ಇದು ಸಹಾಯ ಮಾಡಬಹುದು. ಹಾಗಾಗಿ ಉತ್ತಮ ಶಿಕ್ಷಕರನ್ನು ಸೃಷ್ಟಿಸುವುದು ಅತ್ಯಗತ್ಯ. ಇಂತಹ ಸಮ್ಮೇಳನಗಳು ಉನ್ನತ ಶಿಕ್ಷಣದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು, ಉನ್ನತ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ನಾವು ನಿರಂತರ ಕಲಿಕೆ, ಸುಧಾರಣೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಜ್ಞಾನ, ವರ್ತನೆ, ಕೌಶಲ್ಯಗಳು, ರಚನಾತ್ಮಕ ಕಲಿಕೆಯ ಅಭ್ಯಾಸ, ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಮುಖ್ಯ. “ನಾವು ಫಲಿತಾಂಶ ಆಧಾರಿತ ಶಿಕ್ಷಣವನ್ನು ಗುರಿಯಾಗಿರಿಸಿ ಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)- 2020 ಅನುಷ್ಠಾನದ ಬಗ್ಗೆ ಯಾವುದೇ ರೀತಿಯ ಋಣಾತ್ಮಕ ಭಾವನೆ ಬೇಡ,” ಎಂದರು.
ಎನ್ಇಪಿ-2020 ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುತ್ತದೆ, ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಭಿವೃದ್ಧಿ ರಾಷ್ಟ್ರೀಯ ಚಾಲನಾ ಸಮಿತಿಯ ಸದಸ್ಯ ಡಾ.ಟಿ.ವಿ.ಕಟ್ಟಿಮನಿ ಹೇಳಿದರು. “ಇದು ಸ್ಥಳೀಯ ಭಾಷೆಗಳು ಮತ್ತು ಸಂಸ್ಕೃತಿಗೆ ಪ್ರಾಮುಖ್ಯತೆಯೊಂದಿಗೆ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯನ್ನು ಪ್ರೇರೇಪಿಸುತ್ತದೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ,” ಎಂದು ಅವರು ಹೇಳಿದರು.
ವಿಶ್ವವಿದ್ಯಾನಿಲಯಗಳ ಮಾಜಿ ಕುಲಪತಿಗಳು, ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು ಮತ್ತು ಐಕ್ಯೂಎಸಿ ಸಂಯೋಜಕರು ಮತ್ತು ವಿಶ್ವವಿದ್ಯಾನಿಲಯ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ ಕೆ ಸ್ವಾಗತಿಸಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ಪಿ.ಎಲ್.ಧರ್ಮ ವಂದಿಸಿದರು. ಹಣಕಾಸು ಅಧಿಕಾರಿ ಪ್ರೊ.ಕೆ.ಎಸ್.ಜಯಪ್ಪ, ಸಂಚಾಲಕ ಪ್ರೊ.ಜಯರಾಜ್ ಅಮೀನ್ ಉಪಸ್ಥಿತರಿದ್ದರು.
