ಉತ್ತರಾಖಂಡ: ಮಂಗಳವಾರ ಉಪ ಚುನಾವಣೆ; ಸಿಎಂ ಪುಷ್ಕರ್ ಸಿಂಗ್ ಧಾಮಿ ಭವಿಷ್ಯ ನಿರ್ಧಾರ
ಡೆಹ್ರಾಡೂನ್, ಮೇ 30: ಉತ್ತರಾಖಂಡದ ಚಂಪಾವತ್ ವಿಧಾನ ಸಭೆ ಸ್ಥಾನಕ್ಕೆ ಮಂಗಳವಾರ ನಡೆಯಲಿರುವ ಉಪ ಚುನಾವಣೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ನಾಲ್ವರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ. ಧಾಮಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕಾದರೆ, ಈ ಚುನಾವಣೆಯಲ್ಲಿ ಜಯ ಗಳಿಸಬೇಕಿದೆ.
ಫೆಬ್ರವರಿಯಲ್ಲಿ ನಡೆದ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದರೂ ಧಾಮಿ ಅವರು 2012ರಿಂದ ಎರಡು ಬಾರಿ ಜಯ ಗಳಿಸಿದ್ದ ಖಟಿಮಾ ಕ್ಷೇತ್ರದಲ್ಲಿ ಪರಭಾವಗೊಂಡಿದ್ದರು.
ಚುನಾವಣೆಯಲ್ಲಿ ಸೋತರೂ ಪಕ್ಷ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿದಾಗ, ಚಂಪಾವತ್ನ ಹಾಲಿ ಶಾಸಕ ಕೈಲಾಸ್ ಗೆಹ್ಟೋರಿ ಅವರು ಧಾಮಿಗೆ ತನ್ನ ಸ್ಥಾನವನ್ನು ಬಿಟ್ಟುಕೊಡಲು ಮಂದಾದರು. ಚಂಪಾವತ್ನ ಶಾಸಕ ಸ್ಥಾನಕ್ಕೆ ಎಪ್ರಿಲ್ 21ರಂದು ರಾಜೀನಾಮೆ ನೀಡುವ ಮೂಲಕ ಗೆಹ್ಟೋರಿ ಅವರು ಧಾಮಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ರಾಜ್ಯ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಎರಡನೇ ಅವಧಿಗೆ ಬಿಜೆಪಿ ಗೆದ್ದಿದ್ದು, ಧಾಮಿ ಅವರು ದಾಖಲೆಯ ಅಂತರದಲ್ಲಿ ಗೆಲವು ಸಾಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.