'ಜನಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದು ಉಲ್ಲೇಖಿಸಿ': ಲಿಂಗಾಯತ ಸಂಘಟನೆಗಳ ಮನವಿ

ಬೆಂಗಳೂರು, ಮೇ 30: ಅನೇಕ ವರ್ಷಗಳಿಂದ ರಾಜ್ಯದಲ್ಲಿ ಭುಗಿಲೆದ್ದಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ಲಿಂಗಾಯತ ಸಂಘಟನೆಗಳು ಇಂದು ಮರುಜೀವ ನೀಡಿವೆ. ಮುಂಬರುವ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಮತ್ತು ಜಾತಿಯ ಕಾಲಂನಲ್ಲಿ ತಮ್ಮ ಉಪಪಂಗಡಗಳ ಹೆಸರುಗಳನ್ನು ನೋಂದಾಯಿಸಬೇಕು ಎಂದು 5 ಲಿಂಗಾಯತ ಸಂಘಟನೆಗಳು ಹಾಗೂ ಮಠಾಧೀಶರು ಮನವಿ ಮಾಡಿದ್ದಾರೆ.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಬಸವಧರ್ಮ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರು ಮಾತನಾಡಿ, ಸ್ವತಂತ್ರ ಧರ್ಮವಾಗಿದ್ದ ಲಿಂಗಾಯತ ಧರ್ಮ ಕಾಲಾಂತರದಲ್ಲಿ ವೀರಶೈವ ಎಂದು ಸೇರ್ಪಡೆಯಾದ್ದರಿಂದ ಹಿಂದೂ ಧರ್ಮದಲ್ಲಿ ಸೇರಿಸಲಾಗಿದೆ. ಹಾಗಾಗಿ ವೀರಶೈವ ಹೆಸರನ್ನು ಬಳಸದೇ ಲಿಂಗಾಯತ ಧರ್ಮವು ಜಾಗತಿಕವಾಗಿ ಸ್ವತಂತ್ರ ಅರ್ಥಪೂರ್ಣ ಧರ್ಮವಾಗಿ ಬೆಳೆಯಬೇಕು. ಇದು ನಮ್ಮೆಲ್ಲರ ಅಜೆಂಡಾ ಆಗಬೇಕು ಎಂದು ಕರೆ ನೀಡಿದರು.
ಲಿಂಗಾಯತ ಮಠಾಧೀಶರ ಒಕ್ಕೂಟದ ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಜೈನ, ಬೌದ್ಧ, ಸಿಖ್ ಧರ್ಮದಂತೆ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವಾಗಿದೆ. ನೂರಾರು ವರ್ಷಗಳಿಂದ ವೀರಶೈವ ಹೆಸರಿನಲ್ಲಿ ಲಿಂಗಾಯತ ಧರ್ಮದಲ್ಲಿ ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಆದರೆ ವಚನಗಳ ಅಧ್ಯಯನವಾದ ಬಳಿಕ ಲಿಂಗಾಯತ ಧರ್ಮ ಹೊಸಧರ್ಮ ಎಂದು ಸ್ಪಷ್ಟವಾಗಿದೆ. ಲಿಂಗಾಯತ ಅವೈದಿಕ ಧರ್ಮ ಆಗಿದೆ. ಆದರೆ, ವೀರಶೈವ ವೈದಿಕ ಧರ್ಮ ಆಗಿದೆ. ಹಾಗಾಗಿ ಸ್ವತಂತ್ರಧರ್ಮ ಮಾಡಿಲ್ಲ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಡಾ. ಎಸ್.ಎಂ. ಜಾಮದಾರ್, 2018ರಲ್ಲಿ ವೀರಶೈವ ಮಹಾಸಭೆ ತೆಗೆದುಕೊಂಡ ಅನೇಕ ಕೆಟ್ಟ ತೀರ್ಮಾನಗಳಿಂದ ಲಿಂಗಾಯತ ಮತ್ತು ವೀರಶೈವ ಲಿಂಗಾಯತರ ನಡುವೆ ಗೊಂದಲಗಳು ಸೃಷ್ಟಿಯಾಗಿವೆ. ಲಿಂಗಾಯತರಲ್ಲಿ ವೀರಶೈವರು ಒಂದು ಭಾಗವಾಗಿದ್ದಾರೆ. ಆದರೆ ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತರು ಹಿಂದೂಗಳು ಎಂದು ಘೋಷಿಸಿತು. ನಂತರ ಲಿಂಗಾಯತ ವೀರಶೈವರನ್ನು ಸ್ವತಂತ್ರ ಧರ್ಮ ಎಂದು ಸಾರಿತು. 2001, 2011 ಮತ್ತು 2013ರಲ್ಲಿ ಕೇಂದ್ರ ಸರಕಾರವನ್ನು ಸ್ವತಂತ್ರ ಧರ್ಮಕ್ಕೆ ಒತ್ತಾಯಿಸಿತು. ಆದರೆ ವೀರಶೈವ ಮಹಾಸಭೆಯ ವೀರಶೈವ ಗುರುಗಳು ವೀರಶೈವ ಮಹಾಸಭಾದ ನಿರ್ಣಯವನ್ನು ತಿರಸ್ಕರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಮಹಾಸಭಾ ದ್ವಂದ್ವ ನೀತಿಯಿಂದ 2018ರಲ್ಲಿ ಕರ್ನಾಟಕ ಸರಕಾರ ಲಿಂಗಾಯತರನ್ನು ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮೀಯರು ಎಂದು ಘೋಷಿಸಲು ಬಲವಾಗಿ ವಿರೋಧಿಸಿತು. ಇದರಿಂದಾಗಿ ಅಲ್ಪಸಂಖ್ಯಾತ ಕೋಟದಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದೊರೆಯಬಹುದಾದ 5,000 ಪದವಿ ಮತ್ತು ಸುಮಾರು ಐನೂರು ಸ್ನಾತಕೋತ್ತರ ಪದವಿ ಸೀಟುಗಳಿಂದ ಲಿಂಗಾಯತ ವಿದ್ಯಾರ್ಥಿಗಳು ವಂಚಿತರಾದರು ಎಂದು ಅವರು ಆರೋಪಿಸಿದರು.
ಗೋಷ್ಠಿಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಬಾಳಕಿ ಬಸವಲಿಂಗ, ಲಿಂಗಾಯತ ಧರ್ಮ ಮಹಾಸಭೆ ಗಂಗಾ ಮಾತಾಜಿ, ಜಾಗತಿಕ ಲಿಂಗಾಯತ ಮಹಾಸಭಾದ ಎಲ್ಲ ಜಿಲ್ಲಾಧ್ಯಕ್ಷರು, ಬಸವ ಸಮಿತಿಯ ಅರವಿಂದ ಜತ್ತಿ, ಮತ್ತು ಗಿರೀಶ್ ಉಪಸ್ಥಿತರಿದ್ದರು.
ಧರ್ಮ ಒಡೆದವರು ಯಾರು?
ವೀರಶೈವ ಮಹಾಸಭಾ ಎಂದು ಇದ್ದ ಹೆಸರನ್ನು ಈಗ ವೀರಶೈವ ಲಿಂಗಾಯತ ಮಹಾಸಭಾ ಎಂದು ಬದಲಿಸಿಕೊಂಡಿದೆ. ಹಾಗಾದರೆ ಧರ್ಮವನ್ನು ಯಾರು ಒಡೆದವರು? ಇದರ ಉದ್ದೇಶ ಮುಂಬರುವ ಜನಗಣತಿಯಲ್ಲಿ ಲಿಂಗಾಯತರನ್ನು ವೀರಶೈವ ಲಿಂಗಾಯತ ಎಂದು ಬರೆಯಿಸಿ ಶಾಶ್ವತವಾಗಿ ಲಿಂಗಾಯತ ಸಮಾಜದ ಅಸ್ತಿತ್ವ, ಅಸ್ಮಿತೆ ಮುತ್ತು ಅಲ್ಪಸಂಖ್ಯಾತ ಧರ್ಮದ ಹೋರಾಟವನ್ನು ದಾರಿತಪ್ಪಿಸುವುದು ಆಗಿದೆ. ಈ ಹುನ್ನಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ.
-ಡಾ. ಎಸ್.ಎಂ. ಜಾಮದಾರ್, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ







