ಪೂರ್ವ ಉಕ್ರೇನ್‌ನಲ್ಲಿ ಭೀಕರ ಯುದ್ಧ: ಆಯಕಟ್ಟಿನ ನಗರಕ್ಕೆ ನುಗ್ಗಿದ ರಶ್ಯ ಸೇನೆ
ಕೀವ್, ಮೇ 30: ಉಕ್ರೇನ್ ಯೋಧರ ತೀವ್ರ ಪ್ರತಿರೋಧದ ಮಧ್ಯೆಯೂ ಪೂರ್ವ ಉಕ್ರೇನ್ನ ಅತ್ಯಂತ ಆಯಕಟ್ಟಿನ ನಗರ ಸಿವಿರೊಡೊನೆಟ್‌ಸ್ಕ್‌ನ ಮಧ್ಯಭಾಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ನುಗ್ಗಿಬಂದಿರುವ ರಶ್ಯ ಸೇನೆ ನಗರವನ್ನು ನಿಯಂತ್ರಣಕ್ಕೆ ಪಡೆಯಲು ಭೀಕರ ಸಂಘರ್ಷದಲ್ಲಿ ನಿರತವಾಗಿದೆ ಎಂದು ವರದಿಯಾಗಿದೆ.
ನಗರದ ಹೊರವಲಯದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿರುವ ರಶ್ಯನ್ ಪಡೆ ಹೆಚ್ಚುವರಿ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಇಲ್ಲಿಗೆ ರವಾನಿಸಿ ಆಕ್ರಮಣವನ್ನು ತೀವ್ರಗೊಳಿಸಲು ಸನ್ನದ್ಧವಾಗಿದೆ. ಭೂಸೇನೆ ಸಿವಿರೊಡೊನೆಟ್‌ಸ್ಕ್ ವಶಕ್ಕೆ ಮುಂದೊತ್ತಿ ಬರುತ್ತಿದೆ ಎಂದು ಉಕ್ರೇನ್ ಸೇನೆ ಹೇಳಿದೆ. ದುರದೃಷ್ಟವಶಾತ್ ನಮಗೆ ನಿರಾಶಾಜನಕ ಸುದ್ಧಿಯಿದೆ. ಶತ್ರು ನಗರದೊಳಗೆ ಮುಂದೊತ್ತಿ ಬರುತ್ತಿದ್ದಾನೆ. ಹೋರಾಟ ಮುಂದುವರಿದಿದೆ, ಆದರೆ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ ಎಂದು ಲುಹಾಂಸ್ಕ್ ಗವರ್ನರ್ ಸೆರ್ಹಿಯ್ ಹಯಾದೈ ಟಿವಿ ವಾಹಿನಿಯಲ್ಲಿ ಮಾಹಿತಿ ನೀಡಿದ್ದಾರೆ.
ಯುದ್ಧಕ್ಕೂ ಮುನ್ನ ಸುಮಾರು 1 ಲಕ್ಷ ಜನಸಂಖ್ಯೆಯಿದ್ದ ಸಿವಿರೊಡೊನೆಟ್‌ಸ್ಕ್ ನಗರ ಸೇರಿದಂತೆ ಹಲವು ಪ್ರಮುಖ ಗ್ರಾಮೀಣ ಕೇಂದ್ರಗಳನ್ನು ನಿಯಂತ್ರಣಕ್ಕೆ ಪಡೆದು ಆ ಮೂಲಕ ಸಂಪೂರ್ಣ ಲುಹಾಂಸ್ಕ್ ಪ್ರಾಂತವನ್ನು ಕೈವಶ ಮಾಡಿಕೊಳ್ಳುವುದು ರಶ್ಯದ ಗುರಿಯಾಗಿದೆ.
ರಶ್ಯ ಸೇನೆ ನಗರವನ್ನು ಪ್ರವೇಶಿಸಿದ್ದು ಬೀದಿಯಲ್ಲಿ ಕಾಳಗ ಮುಂದುವರಿದಿದೆ. ನಗರದ ಮಧ್ಯಭಾಗದತ್ತ ರಶ್ಯ ಸೇನೆ ಮುಂದುವರಿದಿದ್ದು ವಿದ್ಯುತ್ ಸಂಪರ್ಕ ಅಥವಾ ಇತರ ಸಂಪರ್ಕ ವ್ಯವಸ್ಥೆ ಮೊಟಕುಗೊಂಡಿದೆ. ನಗರವನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ . ನಗರದಲ್ಲಿ ಸುಮಾರು 13,000 ನಾಗರಿಕರು ಉಳಿದಿದ್ದು ಕಟ್ಟಡದ ನೆಲಮಾಳಿಗೆ ಮತ್ತು ಬಂಕರ್‌ಗಳಲ್ಲಿ ಆಶ್ರಯ ಕಂಡುಕೊಂಡಿದ್ದಾರೆ. ಮೃತರ ಸಂಖ್ಯೆ ಗಂಟೆಗಂಟೆಗೂ ಏರುತ್ತಿದ್ದು ಬೀದಿ ಕಾಳಗ ಮುಂದುವರಿದಿರುವುದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಯುದ್ಧ ಆರಂಭವಾದಂದಿನಿಂದ ನಗರದ ಸುಮಾರು 1,500 ನಾಗರಿಕರು ಹತರಾಗಿದ್ದಾರೆ ಎಂದು ಸಿವಿರೊಡೊನೆಟ್‌ಸ್ಕ್ ನ ಮೇಯರ್ ಒಲೆಕ್ಸಾಂಡ್ರ್ ಸ್ಟ್ರುಯಿಕ್ ಹೇಳಿರುವುದಾಗಿ ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಡೊನ್ಬಾಸ್‌ನ ಲುಹಾಂಸ್ಕ್ ಪ್ರದೇಶದ ಅತ್ಯಂತ ಬೃಹತ್ ನಗರವಾದ ಸಿವಿರೊಡೊನೆಟ್‌ಸ್ಕ್‌ನ ಅರ್ಧಭಾಗ ಈಗಲೂ ಉಕ್ರೇನ್‌ನ ನಿಯಂತ್ರಣದಲ್ಲಿದೆ. ಸುಮಾರು ನಾಲ್ಕೈದು ಗಂಟೆ ನಿರಂತರ ಬಾಂಬ್ ದಾಳಿ, ಆ ಬಳಿಕ ಭೂಸೇನೆಯ ದಾಳಿಯ ತಂತ್ರವನ್ನು ರಶ್ಯ ಬಳಸಿ ಮುಂದೊತ್ತಿ ಬರುತ್ತಿದೆ. ಸೋಮವಾರ ರಶ್ಯದ ಬಾಂಬ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟು 5 ಮಂದಿ ಗಾಯಗೊಂಡಿದ್ದಾರೆ. ನಗರದ ಪ್ರಮುಖ ಮೂಲಸೌಕರ್ಯ ನಾಶಗೊಂಡಿದ್ದು ಹಾನಿಗೀಡಾದ ಜನವಸತಿ ಕಟ್ಟಡಗಳಲ್ಲಿ 60%ದಷ್ಟು ಕಟ್ಟಡಗಳು ದುರಸ್ತಿ ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿವೆ. ಈ ಪ್ರದೇಶದಲ್ಲಿದ್ದ 3 ವೈದ್ಯರು ನಾಪತ್ತೆಯಾಗಿದ್ದು ಅವರು ಪ್ರಯಾಣಿಸುತ್ತಿದ್ದ ಕಾರು ತೀವ್ರ ಹಾನಿಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರದೇಶದ ಸುಮಾರು 1 ಮಿಲಿಯನ್ ಜನತೆಗೆ ನೀರು ಪೂರೈಕೆಯಾಗುತ್ತಿಲ್ಲ ಎಂದವರು ವಿವರಿಸಿದ್ದಾರೆ. ಪರಿಸ್ಥಿತಿ ವಿವರಿಸಲಾರದಷ್ಟು ಕಠಿಣವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್ ಗೆ 5.4 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿಕೊಟ್ಟ ಲಿಥ್ವೇನಿಯಾ ಜನತೆ
ರಶ್ಯದ ಆಕ್ರಮಣವನ್ನು ಎದುರಿಸುವಲ್ಲಿ ನೆರವಾಗುವ ಅತ್ಯಾಧುನಿಕ ಡ್ರೋನ್ ಖರೀದಿಸಲು ಲಿಥ್ವೇನಿಯಾದ ನೂರಾರು ಜನರು ದೇಣಿಗೆ ಸಂಗ್ರಹಿಸಿದ್ದು ಒಟ್ಟು 5.4 ಮಿಲಿಯನ್ ಡಾಲರ್ ಒಟ್ಟುಗೂಡಿದೆ ಎಂದು ವರದಿಯಾಗಿದೆ.
ಟರ್ಕಿಯಿಂದ ಬೈರಾಕ್ತರ್ ಟಿಬಿ2 ಡ್ರೋನ್ ವಿಮಾನ ಖರೀದಿಸಲು ನೆರವಾಗುವ ಉದ್ದೇಶದಿಂದ ನಿಧಿ ಸಂಗ್ರಹ ಅಭಿಯಾನವನ್ನು ಉಕ್ರೇನ್‌ನ ನೆರೆಯ ಪುಟ್ಟದೇಶ ಲಿಥ್ವೇನಿಯಾ ಆರಂಭಿಸಿದ್ದು ಕೇವಲ ಮೂರೂವರೆ ದಿನದಲ್ಲೇ 5.4 ಮಿಲಿಂಯನ್ ಡಾಲರ್ ಮೊತ್ತ ಸಂಗ್ರಹವಾಗಿದೆ.
ಯುದ್ಧ ಆರಂಭಕ್ಕೂ ಮುನ್ನ ಗನ್ ಖರೀದಿ ಬಗ್ಗೆ ನಾವು ಯಾರೂ ಯೋಚಿಸಿಯೇ ಇರಲಿಲ್ಲ. ಆದರೆ ಇದು ಈಗ ಸಹಜ ವಿಷಯವಾಗಿ ಬಿಟ್ಟಿದೆ. ಯುದ್ಧ ಮುಗಿಯುವವರೆಗೂ ನಾವು ಈ ರೀತಿಯ ದೇಣಿಗೆ ಸಂಗ್ರಹಿಸಿ ಉಕ್ರೇನ್ ಗೆ ರವಾನಿಸುತ್ತೇವೆ . ವಿಶ್ವದ ಬೃಹತ್ ದೇಶಗಳ ಸರಕಾರಗಳು ಕಾಲವಿಳಂಬ ಮಾಡುತ್ತಿರುವ ಸಂದರ್ಭದಲ್ಲಿ ಲಿಥ್ವೇನಿಯಾದ ಜನತೆ ಒಗ್ಗೂಡಿದ್ದಾರೆ ಎಂದು ಲಿಥ್ವೇನಿಯಾದ ನಾಗರಿಕರು ಹೇಳಿದ್ದಾರೆ.
ಸಂಗ್ರಹಿಸಿದ ನಿಧಿಯನ್ನು ಲಿಥ್ವೇನಿಯಾದ ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗುವುದು. ಅವರು ಡ್ರೋನ್ ಖರೀದಿಸಿ ಉಕ್ರೇನ್ ಗೆ ಒದಗಿಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಅಪೂರ್ವ, ಅನಿರೀಕ್ಷಿತ ಉಪಕ್ರಮವಾಗಿದೆ. ನಿಧಿ ಸಂಗ್ರಹ ಕಾರ್ಯದ ಮೂಲಕ ಜನತೆ ಉಕ್ರೇನ್ ಯೋಧರಿಗೆ ಸ್ಫೂರ್ತಿ ತುಂಬಿದ್ದಾರೆ ಎಂದು ಲಿಥ್ವೇನಿಯಾದ ಪ್ರಧಾನಿ ಇಂಗ್ರಿಡಾ ಸಿಮೊನೈಟ್‌ರನ್ನು ಉಲ್ಲೇಖಿಸಿ ಟಿವಿ ವಾಹಿನಿ ವರದಿ ಮಾಡಿದೆ.